ನವದೆಹಲಿ ಡಿ 14 (MSP): ಭಾರತದಲ್ಲಿ ನೋಟು ಅಪಮೌಲ್ಯದ ಬಳಿಕ ಜಾರಿಗೆ ಬಂದ ಹೊಸ 2000, 500 ಹಾಗೂ 200 ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ನೇಪಾಳ ಸರ್ಕಾರ ನಿಷೇಧಿಸಿದೆ.
ನೇಪಾಳ ಸರ್ಕಾರದ ಈ ನಿರ್ಧಾರದಿಂದ ಭಾರತದಿಂದ ನೇಪಾಳ ಪ್ರವಾಸ ಕೈಗೊಳ್ಳುವ ಭಾರತೀಯ ಪ್ರವಾಸಿಗರಿಗೆ ಸಮಸ್ಯೆ ಉಂಟಾಗುವುದು ಗ್ಯಾರಂಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ಅಲ್ಲಿಯವರೆಗೆ ಚಾಲ್ತಿಯಲ್ಲಿದ್ದ 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ನಂತರ ಹಲವು ಸುರಕ್ಷತೆಗಳನ್ನು ಒಳಗೊಂಡ 2000, 500 ಹಾಗೂ 200 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು.
ಆದರೆ ಅಚ್ಚರಿದಾಯಕವಾಗಿ ನೇಪಾಳ ಸರ್ಕಾರ ತಮ್ಮ ದೇಶದಲ್ಲಿ ಭಾರತದ ನೂತನ ನೋಟುಗಳ ಚಲಾವಣೆ ನಿಷೇಧಿಸಿದೆ. 2020ಕ್ಕೆ ನೇಪಾಳ ಸರ್ಕಾರವು ’ವಿಸಿಟ್ ನೇಪಾಳ ಇಯರ್ ’ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಭಾರತದ ನೂತನ ನೋಟುಗಳ ಚಲಾವಣೆಗೆ ದಿಗ್ಬಂಧನ ಹಾಕಿದೆ ಎನ್ನಲಾಗುತ್ತಿದೆ. ಇದರಿಂದ ಭಾರತದಲ್ಲಿ ದುಡಿಯುತ್ತಿರುವ ನೇಪಾಳಿಗರಿಗೆ ಹಾಗೂ ನೇಪಾಳಕ್ಕೆ ತೆರಳುವ ಭಾರತೀಯ ಪ್ರವಾಸಿಗರಿಗೆ ತೀವ್ರ ಸಮಸ್ಯೆಯಾಗಲಿದೆ.
ಈ ಹಿಂದೆ ಭಾರತ ಸರಕಾರ ನೋಟುಗಳನ್ನು ನಿಷೇಧಿಸಿದಾಗ ನೇಪಾಳದ ಸೆಂಟ್ರಲ್ ಬ್ಯಾಂಕ್ ಆಗಿರುವ 'ನೇಪಾಳ ರಾಷ್ಟ್ರ ಬ್ಯಾಂಕ್' ಸಹ ಹಳೆಯ 500 ಮತ್ತು 1,000 ರೂ. ಮುಖಬೆಲೆಯ ಭಾರತೀಯ ಕರೆನ್ಸಿಯನ್ನು ನಿಷೇಧಿಸಿತ್ತು.