ಕುಂದಾಪುರ, ಫೆ. 19 (DaijiworldNews/SM): ಕುಟುಂಬದಲ್ಲಿ ಕಾಯಿಲೆ ಕಾಣಿಸಿಕೊಳ್ಳುವಂತೆ, ಕೆಲವೊಮ್ಮೆ ಪ್ರಕರಣಗಳು ಕಾಣಿಸಿಕೊಳ್ಳುತ್ತದೆ. ಸಮಸ್ಯೆ ಕಾಣಿಸಿಕೊಂಡಾಗ ಪರಿಹಾರವನ್ನು ಹುಡುಕಿಕೊಂಡು ನ್ಯಾಯಾಲಯಕ್ಕೆ ಬರುವವರಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯವನ್ನು ಒದಗಿಸುವ ಹೊಣೆಗಾರಿಕೆಯನ್ನು ಸಂತೋಷದಿಂದ ನಿಭಾಯಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅವರು ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಮತ್ತು ವಕೀಲರ ಸಂಘದ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಣ್ಣ ಜಾಗದಲ್ಲಿ ಸುಂದರವಾದ ನ್ಯಾಯಾಲಯ ಕಟ್ಟಡ ಎದ್ದು ನಿಂತಿದೆ. ಮಹಿಳಾ ವಕೀಲರು ಸೇರಿದಂತೆ ಎಲ್ಲರ ಆದ್ಯತೆಗಳನ್ನು ಪರಿಗಣಿಸಲಾಗಿದೆ. ಪ್ರಸ್ತುತ ಇದ್ದ ನ್ಯಾಯಾಲಯ ಕಟ್ಟಡದ ದುರಸ್ತಿಗೂ ಆದ್ಯತೆ ನೀಡಬೇಕು. ನ್ಯಾಯಾಲಯಕ್ಕೆ ಅಗತ್ಯವಾಗಿರುವ ಮೂಲಭೂತ ಸೌಕರ್ಯ ಹಾಗೂ ನ್ಯಾಯಾಧೀಶರನ್ನು ನೀಡುವುದು ಉಚ್ಛ ನ್ಯಾಯಾಲಯ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ. ಈ ಸೌಲಭ್ಯಗಳ ಸದುದ್ದೇಶವಾಗಬೇಕಾದರೆ ವಕೀಲರ ಹಾಗೂ ಕಕ್ಷಕಿದಾರರ ಪಾತ್ರವೂ ಅತಿ ಮುಖ್ಯವಾಗಿದೆ. ಕುಂದಾಪುರ ಪರಿಸರದಲ್ಲಿ ಹೇಳಿಕೊಳ್ಳುವಂತಾ ಐಟಿ/ಬಿಟಿ ಅಥವಾ ಕಾರ್ಪೋರೇಟ್ ಪ್ರಕರಣಗಳು ದಾಖಲಾಗುವುದಿಲ್ಲ. ಬಹುತೇಕ ಕೃಷಿ, ಜಮೀನು, ಮೋಟಾರ್ ಕಾಯಿದೆ ಹಾಗೂ ಗ್ರಹಚಾರ ಕೆಟ್ಟಾಗ ಬರುವ ಅಪರಾಧ ಪ್ರಕರಣಗಳು ದಾಖಲಾಗುತ್ತದೆ. ಅಪಘಾತ ಪ್ರಕರಣಗಳನ್ನು ಪರ್ಸೆಂಟೇಜ್ ಆಧಾರದಲ್ಲಿ ನಡೆಸಬೇಡಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಋತು ರಾಜ್ ಅವಸ್ಥಿ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕುಂದಾಪುರ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಕರಾವಳಿಯ ಪ್ರಮುಖ ತಾಣವೂ ಆಗಿದೆ. ಇಲ್ಲಿನ ವಿಶಿಷ್ಠ ಕುಂದಗನ್ನಡ ಭಾಷೆ ಹಾಗೂ ಪಂಚಗಂಗಾವಳಿ ಸಂಗಮ ಇಲ್ಲಿನ ವೈಶಿಷ್ಟ್ಯವನ್ನು ಹೆಚ್ಚಿಸಿದೆ. ಇಲ್ಲಿ ಕಾರ್ಯಾಚರಿಸುತ್ತಿರುವ 5 ನ್ಯಾಯಾಲಯಗಳ ಅವಶ್ಯಕತೆಗಾಗಿ ಅಂದಾಜು 6 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಒಳ್ಳೆಯ ವಾತಾವರಣದಲ್ಲಿ ನ್ಯಾಯದಾನ ಪ್ರಕ್ರಿಯೆಗಳು ನಡೆಯುವುದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್ ಅವರು, ಮಗು ಬೆಳೆದಂತೆ ಅಗತ್ಯತೆಗಳು ಹೆಚ್ಚುತ್ತದೆ. ಎಲ್ಲ ವ್ಯವಸ್ಥೆಗಳು ಹಾಗೆಯೇ, ಇದಕ್ಕೆ ನ್ಯಾಯಾಲಯವೂ ಹೊರತಾಗಿಲ್ಲ. ಹಿಂದಿನ ಕಟ್ಟಡದಲ್ಲಿ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಒತ್ತಡದ ವಾತಾವರಣಗಳಿತ್ತು. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ಹಾಗೂ ಇತರರಿಗೆ ಒಳ್ಳೆಯ ವಾತಾವರಣದ ಅವಶ್ಯಕತೆ ಇರುತ್ತದೆ. ಹಳೆಯ ಉಪಯೋಗಕ್ಕೆ ಬಾರದ ವಸ್ತುಗಳ ವಿಲೆವಾರಿಯಾಗಬೇಕು. ನೂತನವಾಗಿ ಆರಂಭಿಸಲಾಸ ಇ-ಸೇವಾ ಕೇಂದ್ರದ ಉಪಯೋಗ ಪಡೆದುಕೊಳ್ಳಬೇಕು.ಮುಂಬರುವ ರಾಷ್ಟ್ರೀಯ ಲೋಕ ಅದಾಲತ್ ಗೆ ಸರ್ವರ ಸಹಕಾರವೂ ಬೇಕು. ನ್ಯಾಯಾಲಯಕ್ಕೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಕೇಳಿ ಪಡೆದುಕೊಂಡು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.