ಬಂಟ್ವಾಳ, ಫೆ 19 (DaijiworldNews/HR): ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅರುಣ್ ರೋಶನ್ ಡಿ.ಸೋಜ ಹಾಗೂ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಬಾಯಿಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಫೆ.19 ರಂದು ಶನಿವಾರ ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರ ಸ್ಪರ್ಧೆ ಇಲ್ಲದ ಹಿನ್ನೆಲೆಯಲ್ಲಿ ಈ ಅವಿರೋಧ ಆಯ್ಕೆ ನಡೆದಿದೆ.
ಜ.25 ರ 2020 ರಂದು ಆಡಳಿತ ಮಂಡಳಿಯ ನಿರ್ದೇಶಕರುಗಳ ಆಯ್ಕೆಗೆ ಚುನಾವಣೆ ನಡೆದಿತ್ತು.ಆದರೆ ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದ ಸದಸ್ಯರುಗಳ ಹೆಸರು ಇರುವುದರಿಂದ ಈ ಚುನಾವಣೆಯ ಬಗ್ಗೆ ಪ್ರಶ್ನಿಸಿ ಮಾಜಿ ಅಧ್ಯಕ್ಷ ಸುದರ್ಶನ ಜೈನ್ ಕೋರ್ಟು ಮೆಟ್ಟಿಲು ಏರಿದ್ದರ ಪರಿಣಾಮ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರಿಂದ ಕಳೆದ ಎರಡು ವರ್ಷಗಳಿಂದ ಭೂ ಬ್ಯಾಂಕ್ ನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ.
ಇದೀಗ ನ್ಯಾಯಾಲಯವು ಈ ಹಿಂದಿನ ಪ್ರಕರಣವನ್ನು ಮುಕ್ತಾಯ ಗೊಳಿಸಿರುವುದರಿಂದ ಪ್ರಸ್ತುತ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದು ಬಿಜೆಪಿ ಬೆಂಬಲಿತರ ಪಾಲಿಗೆ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಒಳಿದಿದೆ.
ಕಳೆದ 57 ವರ್ಷಗಳಿಂದ ನಿರಂತರವಾಗಿ ಕಾಂಗ್ರೇಸ್ ಬೆಂಬಲಿತರ ಕೈ ಯಲ್ಲಿದ್ದ ಭೂ ಬ್ಯಾಂಕ್ ಆಡಳಿತ ಮಂಡಳಿ ಪ್ರಥಮ ಬಾರಿಗೆ ಬಿಜೆಪಿ ಬೆಂಬಲಿತ ರ ಪಾಲಿಗೆ ಧಕ್ಕಿದೆ.
2020 ರ ಫೆ.25 ರಂದು ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ 12 ಸದಸ್ಯರು ಗಳ ಪೈಕಿ ಕಾಂಗ್ರೆಸ್ ಬೆಂಬಲಿತ 5 ಸದಸ್ಯರು ಗೆಲುವು ಸಾಧಿಸಿದರೆ, ಬಿಜೆಪಿ ಬೆಂಬಲಿತ 7 ಸದಸ್ಯರು ಗೆಲುವು ಸಾಧಿಸಿದ್ದರು.
ಅ ಬಳಿಕದ ರಾಜಕೀಯ ಬದಲಾವಣೆಗೆ ಸಿಲುಕಿದ ಕಾಂಗ್ರೇಸ್ ಬೆಂಬಲಿತ ಸದಸ್ಯ ರಾಜೇಶ್ ಬಾಳೆಕಲ್ಲು ಅವರು ಕಾಂಗ್ರೇಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡ ಬಳಿಕ 7 ಸದಸ್ಯರನ್ನು ಹೊಂದಿದ್ದ ಬಿಜೆಪಿ ಬೆಂಬಲಿತರ ಸಂಖ್ಯೆಗೆ ಇನ್ನೊಂದು ಸೇರ್ಪಡೆ ಗೊಂಡು 8 ಸದಸ್ಯರ ಬಲಾಬಲ ಹೊಂದಿದರೆ ಕಾಂಗ್ರೇಸ್ ಬೆಂಬಲಿತರ ಸಂಖ್ಯೆ 4 ಕ್ಕೆ ಇಳಿದಿದೆ.
ಬಿ.ಸಿ.ರೋಡಿನ ಭೂಬ್ಯಾಂಕ್ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು,ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆವರು ಚುನಾವಣಾ ಅಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಿದರು.
ಪ್ರಾಮಾಣಿಕತೆ ಮತ್ತು ಪರಿಶ್ರಮ ಇದ್ದರೆ ಯಾವುದೇ ಚುನಾವಣೆ ಯನ್ನು ಎದುರಿಸಿ ಜಯಶಾಲಿಯಾಗಬಹುದು ಎಂಬುದಕ್ಕೆ ಪಿ.ಎಲ್.ಡಿ.ಬ್ಯಾಂಕ್ ಚುನಾವಣೆಯಲ್ಲಿನ ಗೆಲುವು ಸಾಕ್ಷಿಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದ ಶಾಸಕರು, ಉತ್ತಮ ನಿರ್ದೇಶಕರ ತಂಡದ ಜೊತೆ ಪಿ.ಲ್.ಡಿ.ಬ್ಯಾಂಕ್ ನ ವ್ಯವಹಾರವನ್ನು ಮಾದರಿಯಾಗಿ ಮುಂದುವರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಮಾಜಿ ಜಿ.ಪಂ.ಸದಸ್ಯರುಗಳಾದ ತುಂಗಪ್ಪ ಬಂಗೇರ,ರವೀಂದ್ರ ಕಂಬಳಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಸಂತೋಷ್ ಕುಮಾರ್ ಶೆಟ್ಟಿ ಬೋಳಿಯಾರು, ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಮಾಜಿ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು, ರಾಯಿ ಗ್ರಾ.ಪಂ.ಅಧ್ಯಕ್ಷ ರಶ್ಮಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.