Karavali
ಕಾರ್ಕಳ: ಅರ್ಹ ರೈತರಿಗೆ ಜಮೀನು ವಾಪಾಸ್ - ಸಚಿವ ಆರ್. ಆಶೋಕ್
- Sat, Feb 19 2022 05:03:39 PM
-
ಕಾರ್ಕಳ, ಫೆ 19 (DaijiworldNews/MS): ರಾಜ್ಯದಲ್ಲಿ ಜಟಿಲ ಸಮಸ್ಯೆಯಾಗಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತೃ ಇಲಾಖೆಗೆ 15 ಲಕ್ಷ ಎಕರೆ ಭೂಮಿಯನ್ನು ಮರಳಿ ಪಡೆದು ಆ ಭೂಮಿಯಲ್ಲಿ ಇರುವ ಕೃಷಿಕರಿಗೆ ಉಳುಮೆ ಮಾಡಲು ಹಾಗೂ ವಾಸ್ತವ್ಯ ಇದ್ದ ಬಡವರ್ಗದವರಿಗೆ ನೀಡುವುದಾಗಿ ಭರವಸೆ ಸಚಿವ ಆರ್.ಅಶೋಕ್ ನೀಡಿದರು.
ಕಾರ್ಕಳ ತಾಲೂಕು ಕಚೇರಿಯ ಮುಂಭಾಗದ ಮೈದಾನದಲ್ಲಿ ಶನಿವಾರ ಜರುಗಿದ್ದ ಕಂದಾಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕಾರ್ಕಳದಲ್ಲಿ ಜರುಗಿದ್ದ ಕಂದಾಯ ಮೇಳವನ್ನು ಕೇಂದ್ರಿಕೃತವಾಗಿಟ್ಟು ಕೊಂಡು ರಾಜ್ಯದ ಪ್ರತಿ ತಾಲೂಕುಗಳಲ್ಲಿ 10 ದಿನಗಳ ಕಾಲ ಕಂದಾಯ ಮೇಳ ನಡೆಸುವುದಾಗಿ ಕಂದಾಯ ಸಚಿವ ಅಶೋಕ್ ತಿಳಿಸಿದರು. ಕಡತಗಳಿಗೆ ಗತಿ ಕಾಣಿಸಿ ಇದರಿಂದ ಅರ್ಜಿದಾರನಿಗೆ ನೆಮ್ಮದಿ ಸಿಗುತ್ತದೆ. ಆ ಮೂಲಕ ಮುಂದಿನ ಹೆಜ್ಜೆ ಇಡಲು ಸಹಕಾರಿಯಾಗುತ್ತದೆ ಎಂದರು. ಹಳ್ಳಿಯ ಸಮಸ್ಯೆಗೆ ಕಣ್ಣಾರೆ ಕಂಡಾಗ ನೇರ ಪರಿಹಾರ ಕಂಡು ಕೊಳ್ಳಲು ಸಾಧ್ಯ. ಕಂದಾಯ ಇಲಾಖೆಯಲ್ಲಿ ಭೂ ಪರಿವರ್ತನೆಗೆ ಹೊಸ ರೂಪವನ್ನು ಮೂರುದಿನ ಎರಡು ಮೂರು ದಿನಗಳಲ್ಲಿ ನೀಡಲಾಗುವುದು. ಪಹಣಿ ಪತ್ರವನ್ನು ಪ್ರತಿ ಮನೆಗೆ ತಲುಪಿಸುವುದಾಗಿ ಮೂಲಕ ಮಹತ್ವರ ಬದಲಾವಣೆ ತರುವುದಾಗಿ ಸಚಿವ ಅಶೋಕ ತಿಳಿಸಿದರು.
ವಿವಿಧ ತರದ ಮಾಶಸನ ವಿತರಣೆಯ ಹೆಸರಿನಲ್ಲಿ ಭಾರೀ ಗೋಲ್ಮಾಲ್ ನಡೆದಿದ್ದು, ಅದಕ್ಕೆ ನಮ್ಮ ಸರಕಾರ ಮುಕ್ತಿ ನೀಡಿದೆ. ರೂ. 7,500 ಕೋಟಿ ವಿಂಚಣಿಗಾಗಿ ವಿನಿಯೋಗಿಸಲಾಗುತ್ತಿತ್ತು. ಅದರಲ್ಲಿ ರೂ. 400 ಕೋಟಿ ಮೊತ್ತ ಉಳಿತಾಯವಾಗಿದೆ. ಆ ಮೂಲಕ 35,000 ಹೊಸಬರಿಗೆ ಪಿಂಚಣೆ ನೀಡಲಾಗಿದೆ ಎಂದರು.
ಹೊಸತನಕ್ಕೆ ಜನಾಕರ್ಷಣೆ ಸಹಜ. ಹೊಸ ಯೋಜನೆಯಿಂದ ಹೊಸ ಭರವಸೆ, ಚೈತನ್ಯವನ್ನು ತುಂಬುತ್ತದೆ. ಸರಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ವ್ಯಕ್ತಿಯಾಗುತ್ತಾನೆ. ಜನಗುರುತಿಸಿದಾಗ ಮಾತ್ರ ಆತನ ಜನನಾಯಕನಾಗಲು ಅರ್ಹನಾಗುತ್ತಾನೆ. ಅಂತಹ ಸತ್ಕಾರ್ಯಗಳನ್ನು ಸಚಿವ ಸುನೀಲ್ ಕುಮಾರ್ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಧನಿ, ಶಕ್ತಿ ಇರುವವರಿಗೆ ಸರಕಾರದ ಸವಲತ್ತು ಸಫಲರಾಗುತ್ತಾರೆ. ಧ್ವನಿ ಇಲ್ಲದವರು ಕಷ್ಟಗಳನ್ನು ಕೇಳುವವರೇ ಇಲ್ಲ. ಅದು ಬದಲಾವಣೆಯಾಗಬೇಕು. ವ್ಯಕ್ತಿಯನ್ನು ಗುರುತಿಸಿ ಸವಲತ್ತನ್ನು ವಿತರಿಸದೇ ಆತನ ಸ್ಥಿತಿಗತಿಯನ್ನು ಗಮನಿಸಿ ಸವಲತ್ತುಗಳನ್ನು ತಲುಪಿಸುವ ಅಗತ್ಯ ಇದೆ. ಕಚೇರಿಗಳಲ್ಲಿ ಜನರನ್ನು ಅಲೆದಾಡುವಂತೆ ಮಾಡಿದರೆ ತಕ್ಕಶಾಸ್ತಿಗೆ ಗುರಿಯಾಗಬೇಕಾದಿತು. ಬಡವರ ಪಾಲಿಗೆ ನ್ಯಾಯ ನೀಡಿ ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳನ್ನು ಎಚ್ಚರಿಸಿದರು.
ಇದೇ ಕಾರಣದಿಂದಾಗಿ ಕಂದಾಯ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ. ಹಳ್ಳಿಗಳಿಗೆ ತಲುಪುವ ಜಿಲ್ಲಾಧಿಕಾರಿಗಳು ದಿನದ 24 ಹಳ್ಳಿಗಳ್ಲಿಯೇ ವಾಸ್ತವ್ಯವಿದ್ದು, ಅರ್ಜಿಗಳನ್ನು ಪರಿಶೀಲಿಸಿ ಅಲ್ಲಿಯೇ ಪರಿಹಾರ ಕಲ್ಪಿಸಬೇಕು. ಆ ಸಂದರ್ಭದಲ್ಲಿ ಅಂಗನವಾಡಿಯಲ್ಲಿ, ವಿದ್ಯಾರ್ಥಿನಿಲಯಗಳ ಊಟೋಪಚಾರವನ್ನು ಸ್ವೀಕರಿಸಬೇಕು. ವಿದ್ಯಾರ್ಥಿಗಳು ಸೇವಿಸುವ ಆಹಾರವನ್ನೇ ಅಧಿಕಾರಿಗಳು ಸೇವಿಸುವ ಮೂಲಕ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಬೇಕೆಂದರು.
ಮಹಾ ಕಂದಾಯ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್ ರಾಜ್ಯದ ಆಡಳಿತದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಸ ಚಿಂತನೆಯನ್ನು ಮುಂದಿಟ್ಟಿದ್ದು, ಅದರ ಫಲವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಸಿದ್ದು, ತನ್ಮೂಲಕ ರಾಜ್ಯ ವ್ಯಾಪ್ತಿಗೆ ವ್ಯಾಪಿಸಲಿದೆ . ಕರೋನಾ ಸಂಕಷ್ಟದಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ಸರಕಾರವು ಮತ್ತು ಆಡಳಿತ ವರ್ಗವು ಅದರತ್ತಗಮನ ಹರಿಸಿರುವುದರಿಂದ ಅಭಿವೃದ್ಧಿ ಕಾರ್ಯಗಳು ಒಂದಿಷ್ಟು ನೆನೆಗುದ್ದಿಗೆ ಬಿದ್ದಿದವು. ಈ ನಡುವೆ ಕಡತವಿಲೇವಾರಿ ಸಪ್ತಾಯ, ಮಹಾಕಂದಾಯ ಮೇಳದ ಮೂಲಕ ಸರಕಾರಿ ಆಡಳಿತವನ್ನು ಚುರುಕು ಮುಟ್ಟಿಸುವ ಕಾರ್ಯವು ಯಶಸ್ಸಿಯಾಗಿ ನಡೆದಿದೆ.
13,700 ಕಡತಗಳ ಪೈಕಿ 11 ಸಾವಿರ ಕಡತ ವಿಲೇವಾರಿ ಪೂರ್ಣಗೊಳಿಸಲಾಗಿದೆ. 4367 ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಣೆ ಮಾಡಲಾಗಿದೆ. 60 ವರ್ಷ ತುಂಬಿದ ಹಿರಿಯ ನಾಗರಿಕರನ್ನು ಗುರುತಿಸಿ ಅವರನ್ನು ವೃದ್ಧಾಪ್ಯ ವೇತನ ನೀಡಲಾಗಿದೆ. ಆ ಮೂಲಕ ರಾಜ್ಯದಲ್ಲಿ ಕಾರ್ಕಳ ತಾಲೂಕು ದಾಖಲೆ ಬರೆದಿದೆ. ಇದೊಂದು ಸಾಮಾನ್ಯ ಸಂಗತಿಯಲ್ಲ.33 ಇಲಾಖೆಗಳನ್ನು ಒಟ್ಟುಗೂಡಿಸಿ ಈ ಸೌಲಭ್ಯ ವಿತರಣೆ ಮಾಡಲಾಗಿದೆ. ಸರ್ಕಾರಿ ಸವಲತ್ತುಗಳು ಪ್ರತಿಮನೆಗೂ ತಲುಪಿಸುವ ಪ್ರಯತ್ನ ನಡೆಸುತ್ತಿದ್ದೇವೆ. ಮಹಾದಂದಾಯ ಮೇಳದಲ್ಲಿ ಸಕ್ರಿಯಾರಾದ ಸರಕಾರಿ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗಳು, ಸಮಾಜಸೇವಕರು, ಸ್ಥಳೀಯಾ ಜನಪ್ರತಿನಿಧಿಗಳನ್ನು ಕಾರ್ಯದ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಸ್ವರ್ಣ ಕಾರ್ಕಳ ಕಲ್ಪನೆಯೊಂದಿಗೆ ಕಳೆದ 10 ವರ್ಷಗಳಲ್ಲಿ ಕಾರ್ಕಳ ಕ್ಷೇತ್ರದ ಅಭಿವೃದ್ಧಿ ನಿರಂತರವಾಗಿ ನಡೆಯುವ ಮೂಲಕ ಹೊಸತನವನ್ನು ನೀಡಲಾಗುತ್ತಿದೆ. ವಾರಾಹಿ ಯೋಜನೆಯನ್ನು ಕಾರ್ಕಳಕ್ಕೆ ವಿಸ್ತರಿಸುವ ಮೂಲಕ ೪೬ ಸಾವಿರ ಮನೆಗಳಿಗೆ 2023ರೊಳಗಾಗಿ ಕುಡಿಯುವ ನೀಡಿನ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಡೀಮ್ಡ್ ಫಾರೆಸ್ಟ್ ಮತ್ತು ಕುಮ್ಕಿ ಹಕ್ಕಿನ ಸಮಸ್ಸೆ ಶೀಘ್ರ ಪರಿಹಾರ ನೀಡುವ ಮೂಲಕ ಯುದೋಪಾದಿಯಲ್ಲಿ ಆರ್ಹರಿಗೆ ಸೌಲಭ್ಯ ಕಲ್ಪಿಸುತ್ತೇವೆ. ಇದು ಕೇವಲ ಮಾತಾಗದೇ ಸಂಕಲ್ಪವು ಆಗಿದೆ ಎಂದರು.
ಕಾರ್ಕಳ ತಹಶಿಲ್ದಾರ್ ಪುರಂದರ ಸ್ವಾಗತಿಸಿದರು. ಸಂಗೀತಾ ಕುಲಾಲ್ ನಿರೂಪಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಧನ್ಯವಾದವಿತ್ತರು.ಜಿಲ್ಲಾಧಿಕಾರಿ ಕೂರ್ಮರಾವ್ , ಸಹಾಯಕ ಕಮಿಷನರ್ ರಾಜು , ಉಡುಪಿ ಜಿಲ್ಲಾ ಕಾರ್ಯ ನಿರ್ವಣಾಧಿಕಾರಿ ನವೀನ್ ಭಟ್ ,ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ,ಕಾಪು ಶಾಸಕ ಲಾಲಾಜಿ ಮೆಂಡನ್, ಕರ್ನಾಟಕ ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕರಾವಳಿ ಅಭಿವೃದ್ಧಿ ನಿಗಮ ಅದ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ , ಕಾರ್ಕಳ ಎ.ಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್, ಕಾರ್ಕಳ ಪುರಸಭೆ ಅದ್ಯಕ್ಷ ಸುಮ ಕೇಶವ್, ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಮಣಿ ಇತರ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.