ಕಾಸರಗೋಡು,ಡಿ 14 (MSP): ಕಣ್ಣೂರು ಜಿಲ್ಲೆಯಿಂದ ಮತ್ತೆ ಎರಡು ಕುಟುಂಬಗಳ ಸದಸ್ಯರ 10 ಮಂದಿ ನಾಪತ್ತೆಯಾಗಿದ್ದು, ಇವರು ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ಗೆ ಸೇರಲು ಭಾರತವನ್ನು ತೊರೆದಿದ್ದಾರೆ ಎಂದು ಪೊಲೀಸರು ಮಾಹಿತಿ ಲಭಿಸಿದೆ.
ಕಣ್ಣೂರು ಅಝಿಕೋಡು ಪೂತಪ್ಪಾರ ಎಂಬಲ್ಲಿನ ಎರಡು ಕುಟುಂಬದ ಕೆ.ಸಜ್ಜಾದ್, ಶಾಹೀನಾ ದಂಪತಿ ಹಾಗೂ ಇವರ ಇಬ್ಬರು ಮಕ್ಕಳು, ಪೂತಪ್ಪಾರದ ಅನ್ವರ್, ಆಫ್ಸೀಲಾ ದಂಪತಿ ಹಾಗೂ ಇವರ ಮೂವರು ಮಕ್ಕಳು, ಕುರುವದ ಟಿ.ಪಿ.ನಿಜಾಂ ಎಂಬವರು ದೇಶ ಬಿಟ್ಟು ಉಗ್ರಗಾಮಿ ತಂಡಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಇವರು ನ.20 ರಂದು ಮೈಸೂರಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟವರು ವಾಪಾಸ್ ಆಗದ ಹಿನ್ನಲೆಯಲ್ಲಿ ಸಂಬಂಧಿಕರು ದೂರು ನೀಡಿದ್ದರು.
ಪೊಲೀಸರ ತನಿಖೆ ಪ್ರಕಾರ ಇವರೆಲ್ಲರೂ, ಯು.ಎ.ಇ ತಲುಪಿದ್ದು, ಅಲ್ಲಿಂದಲೂ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.ಸಿರಿಯಾದಲ್ಲಿ ಉಗ್ರಗಾಮಿ ತಂಡಗಳ ಕೇಂದ್ರ ಸಂಪೂರ್ಣ ಭಗ್ನಗೊಂಡಿರುವುದರಿಂದ ಇವರು ಅಫ್ಗಾನಿಸ್ತಾನದ ಯಾವುದೋ ಕೇಂದ್ರಕ್ಕೆ ತಲುಪಿರಬೇಕೆಂದು ಪೊಲೀಸರು ಶಂಕಿಸುತ್ತಿದ್ದಾರೆ. ಕಣ್ಣೂರು ಡಿವೈಎಸ್ಪಿ ಕೆ. ಸದಾನಂದನ್ ತನಿಖೆ ನಡೆಸುತ್ತಿದ್ದಾರೆ.
ಇವರ ಕೆಲ ಸಂಬಂಧಿಕರು ಈ ಹಿಂದೆಯೇ ಐಸಿಸ್ ಸೇರಲು ತೆರಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಸಕ್ತ ಪೂತಪ್ಪಾರದಿಂದ ನಾಪತ್ತೆಯಾಗಿರುವ ಅನ್ವರ್ ಪತ್ನಿ ಅಫ್ಸಿಲಾ, ಸಿರಿಯದಲ್ಲಿ ಸಾವನಪ್ಪಿದ ಶಮೀರ್ ಎಂಬಾತನ ಪತ್ನಿ ಫೌಸಿಯಾಳ ಸಹೋದರಿ. ಶಮೀರ್ ನ ಇಬ್ಬರು ಮಕ್ಕಳಾದ ಸಲ್ನಾನ್ ಮತ್ತು ಸಫ್ವಾನ್ ಐಸಿಸ್ ಯುದ್ದಭೂಮಿಯಲ್ಲಿ ಸಾವನ್ನಪ್ಪಿರುವುದಾಗಿ ಮಾಹಿತಿ ಇದೆ. ಮೀರ್ ಎಂಬಾತನ ಪತ್ನಿ ಫೌಸಿಯಾಳ ತಂಗಿಯೇ ಆಫ್ಸೀಲಾ. ಈ ಮಾಹಿತಿ ಲಭಿಸಿದ ನಂತರ ಅನ್ವರ್- ಆಫ್ಸೀಲಾ ದಂಪತಿ ಹಾಗೂ ಕುಟುಂಬ ಐಸಿಸ್ ಸೇರಲು ನಿರ್ಧರಿಸಿರಬೇಕು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದರು.