ಉಡುಪಿ, ಫೆ 19 (DaijiworldNews/MS): ಬಡ ಕೂಲಿ ಕಾರ್ಮಿಕ ಕುಟುಂಬಕ್ಕೆ ಸಲ್ಲಬೇಕಾದ ಅಪಘಾತ ವಿಮಾ ಪರಿಹಾರ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ , ಲಪಟಾಯಿಸಿದ್ದ ವಕೀಲನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಕಕ್ಷಿದಾರನಿಗೆ ವಂಚಿಸಿದ ವಕೀಲನ ಹೆಸರು ಅಲೆವೂರು ಪ್ರೇಮರಾಜ ಕಿಣಿ.
ಸಂತ್ರಸ್ತರಿಗೆ ೨.೫ ಲಕ್ಷ ರೂಪಾಯಿ ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಅವರು ಮೊದಲ ಅಪರಾಧಿ ಪ್ರೇಮರಾಜ ಕಿಣಿಗೆ ಜೀವಾವಧಿ ಶಿಕ್ಷೆ, 3ನೇ ಅಪರಾಧಿ ಹರಿಶ್ಚಂದ್ರ ಆಚಾರ್ಯಗೆ 7 ವರ್ಷ ಶಿಕ್ಷೆ ವಿಧಿಸಿದರು. ಈ ಪ್ರಕರಣದ 2ನೇ ಆರೋಪಿ ವಿನಯಕುಮಾರ್ ಈಗಾಗಲೇ ಮೃತಪಟ್ಟಿದ್ದಾನೆ.
ಏನಿದು ಘಟನೆ?
ಬೆಳ್ತಂಗಡಿ ತಾಲೂಕು ನಾರವ ಮಡಕೋಡು ಗ್ರಾಮದ ಕಡಂಬಿಲದ ಬಡ ಕೂಲಿ ಕಾರ್ಮಿಕ ಚಂಬು ಅವರ ಪತ್ನಿ ಕುಂದಾದು 2002ರ ಮೇ 13ರಂದು ಕೊಲ್ಲೂರಿಗೆ ತೆರಳುತ್ತಿದ್ದಾಗ ಕಾರ್ಕಳ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಗಂಡ ಚಂಬು ಹಾಗೂ ಅವರ ಮಕ್ಕಳಾದ ಅಣ್ಣು, ಸಾಧು ಅಕ್ಕು ಹಾಗೂ ಕಜವೆ ಅಪಘಾತ ವಿಮಾ ಪರಿಹಾರ ಕೋರಿ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ತನಿಖೆ ಬಳಿಕ ನ್ಯಾಯಾಲಯ 2003ರ ಆಗಸ್ಟ್ನಲ್ಲಿ 1,22,400 ರೂ. ಪರಿಹಾರ ಹಾಗೂ ಬಡ್ಡಿ ಸೇರಿ 1,33,246 ರೂ. ನೀಡುವಂತೆ ಆದೇಶಿಸಿತ್ತು. ಅದನ್ನು ಪಡೆದ ಚಂಬು ಕುಟುಂಬ ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಆದೇಶದಂತೆ ವಿಮಾ ಕಂಪನಿ 1,85,600 ರೂ., ಬಡ್ಡಿ ಸೇರಿ ಒಟ್ಟು 2,57,549 ರೂ. ಮೊತ್ತದ ಹಣವನ್ನು ನ್ಯಾಯಾಲಯದಲ್ಲಿ ಜಮೆ ಮಾಡಿತ್ತು.
ಆದರೆ ಈ ಹಂತದಲ್ಲಿ ವಕೀಲ ಸೇರಿ ಮೂವರು ಆರೋಪಿಗಳು ನ್ಯಾಯಾಲಯ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ವಂಚಿಸಿ ಬಡ ಕುಟುಂಬಕ್ಕೆ ಸಿಗಬೇಕಿದ್ದ ಪರಿಹಾರ ಮೊತ್ತವನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಿದ್ದರು. ಈ ಪ್ರಕರಣದಲ್ಲಿ ಶಿವಪ್ರಸಾಧ್ ಆಳ್ವರನ್ನು ಕರ್ನಾಟಕ ಸರ್ಕಾರ ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸಿತ್ತು.