ಮಂಗಳೂರು,ಫೆ 19 (DaijiworldNews/MS): ಜಿಲ್ಲೆಯಲ್ಲಿ ಇದೇ ಫೆ.27ರಿಂದ ಮಾರ್ಚ್ 2 ರವರೆಗೆ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ಸಂಬಂಧಿಸಿದ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು.
ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಫೆ.18ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೋಲಿಯೋ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕಾಗಿ 0-5 ವರ್ಷದೊಳಗಿನ 1,54,023 ಮಕ್ಕಳನ್ನು ಗುರುತಿಸಲಾಗಿದ್ದು, ಅವರೆಲ್ಲರಿಗೂ ಫೆ.27 ರಿಂದ ಪ್ರಾರಂಭವಾಗುವ ಬೂತ್ ಅಭಿಯಾನದಲ್ಲಿ ಲಸಿಕೆ ನೀಡಬೇಕು, ಲಸಿಕೆ ಅವಧಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು 2 ದಿನ ಗ್ರಾಮೀಣ ಪ್ರದೇಶಗಳಲ್ಲಿ ಮನೆ, ಮನೆ ಭೇಟಿ ನೀಡಿ ಬಿಟ್ಟು ಹೋಗಿರುವ ಮಕ್ಕಳಿಗೆ ಲಸಿಕೆಯನ್ನು ನೀಡಬೇಕು, ನಗರ ಪ್ರದೇಶದಲ್ಲಿ 3 ದಿನ ಮನೆ ಭೇಟಿ ನೀಡಿ ಎಲ್ಲಾ ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಬೇಕು ಎಂದು ತಿಳಿಸಿದರು.
ಈ ಅಭಿಯಾನವನ್ನು ಯಶಸ್ವಿಗೊಳಿಸಲು 921 ಲಸಿಕಾ ಬೂತ್ಗಳನ್ನು ರಚಿಸಲಾಗಿದೆ, ಅಲ್ಲದೆ 29 ಟ್ರಾನ್ಸಿಸ್ಟ್ ಬೂತ್ ಹಾಗೂ 5 ಮೊಬೈಲ್ ಟೀಮ್ಗಳ ಮೂಲಕ ಲಸಿಕಾ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲಾಗುವುದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಶಾಲೆಗಳಲ್ಲಿ ಪೋಲಿಯೋ ಬೂತ್ಗಳನ್ನು ತೆರೆಯಲಾಗುವುದು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಎಲ್ಲಾ ಶಾಲೆಗಳಿಗೆ, ನರ್ಸರಿ ಶಾಲೆ, ಶಿಶುಮಂದಿರಗಳಿಗೆ ಮಾಹಿತಿ ನೀಡಬೇಕು ಹಾಗೂ ಎಲ್ಲಾ ಶಾಲೆಗಳಲ್ಲಿ ಜರಗುವ ಪೋಷಕ-ಶಿಕ್ಷಕರ ಸಭೆಯಲ್ಲೂ ಈ ಕುರಿತ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.
ಈ ಅವಧಿಯಲ್ಲಿ ಮೆಸ್ಕಾಂನವರು 24 ರಿಂದ ಮಾರ್ಚ್ 2 ರ ವರೆಗೆ ವಿದ್ಯುತ್ ಕಡಿತ ಮಾಡಬಾರದು, ಅಗತ್ಯವಿರುವ ವಾಹನಗಳನ್ನು ಸಾರಿಗೆ ಇಲಾಖೆಯವರು ವ್ಯವಸ್ಥೆ ಮಾಡಿಕೊಡಬೇಕು, ಆರೋಗ್ಯ ಇಲಾಖೆ ಐ.ಇ.ಸಿ ಕಾರ್ಯಕ್ರಮದ ಮೂಲಕ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ತಳ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಫ್ಲಾಟ್/ಅರ್ಪಾಟ್ಮೆಂಟ್ಗಳು ಮತ್ತು ಕಟ್ಟಡ ಕಾರ್ಮಿಕರ ಮಕ್ಕಳು, ವಲಸೆ ಬಂದ ಕುಟುಂಬ, ಕೊಳಚೆ ಪ್ರದೇಶದಲ್ಲಿ ವಾಸವಿರುವ 0-5 ವರ್ಷದೊಳಗಿನ ಎಲ್ಲಾ ಮಕ್ಕಳು ಪೊಲಿಯೋ ಹನಿ ಪಡೆಯುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ರೋಟರಿ, ಲಯನ್ಸ್ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯವರು 0-5 ವರ್ಷದೊಳಗಿನ ಮಕ್ಕಳು ಪೋಲಿಯೋ ಹನಿಯಿಂದ ವಂಚಿತರಾಗದಂತೆ ಮಕ್ಕಳ ಪೋಷಕರಿಗೆ ಮನವೋಲಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ರಾಜೇಶ್, ವಿಶ್ವ ಆರೋಗ್ಯ ಸಂಸ್ಥೆಯ ಡಾ. ಸತೀಶ್ ಚಂದ್ರ, ಎಲ್ಲಾ ತಾಲೂಕು ತಹಶೀಲ್ದಾರ್ಗಳು, ಖಾಸಗಿ ಮೆಡಿಕಲ್ ಹಾಗೂ ನರ್ಸಿಂಗ್ ಮುಖ್ಯಸ್ಥರು, ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಸಂಬಂಧಿಸಿದವರು ಉಪಸ್ಥಿತರಿದ್ದರು.