ಬಂಟ್ವಾಳ, ಫೆ.18 (DaijiworldNews/SM): ಸಹಕಾರಿ ಬ್ಯಾಂಕ್ ಒಂದಕ್ಕೆ ನುಗ್ಗಿದ ಕಳ್ಳರು ಹಣಕ್ಕಾಗಿ ಹುಡುಕಾಟ ನಡೆಸಿ ಬರಿಗೈಯಲ್ಲಿ ವಾಪಾಸಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಸಿದ್ದಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಯ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಬ್ಯಾಂಕ್ ನೊಳಗೆ ಜಾಲಾಡಿ ಯಾವುದೇ ಪ್ರಯೋಜನವಿಲ್ಲದೆ ವಾಪಾಸಾಗಿದ್ದಾರೆ. ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಿದ್ದಕಟ್ಟೆ ಸಹಕಾರಿ ಬ್ಯಾಂಕ್ ನ ಎದುರಿನ ಶಟರ್ ನ್ನು ಪಿಕ್ಕಾಸು ಬಳಸಿ ಬೀಗ ಮುರಿದು ಬ್ಯಾಂಕ್ ಒಳಗೆ ನುಗ್ಗಿದ್ದಾರೆ , ಬಳಿಕ ಬ್ಯಾಂಕ್ ಗೊಡ್ರಜ್ ಹಾಗೂ ಕ್ಯಾಶ್ ಕೌಂಟರ್ ನ್ನು ಜಾಲಾಡಿದ್ದಾರೆ .
ಬೆಳಿಗ್ಗೆ ಬ್ಯಾಂಕ್ ನ ಸಮೀಪದ ಅಂಗಡಿಯವರು ನೋಡಿದಾಗ ಬ್ಯಾಂಕ್ ನ ಶಟರ್ ಮುರಿದ ಬಗ್ಗೆ ಗಮನಕ್ಕೆ ಬಂದಿದ್ದು ಬಂಟ್ವಾಳ ಪೋಲೀಸರಿಗೆ ಮಾಹಿತಿ ನೀಡಲಾಗಿದೆ. ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಕುರುಹುಗಳು ಪತ್ತೆಯಾಗಿದ್ದು, ಕೃತ್ಯಕ್ಕರ ಬಳಸಲಾಗಿದ್ದ ಪಿಕ್ಕಾಸು ಹಾಗೂ ಕಬ್ಬಿಣದ ಸಲಾಕೆಯನ್ನು ಬ್ಯಾಂಕ್ ಸಮೀಪವೇ ಎಸೆದಿದ್ದಾರೆ. ಸ್ಥಳಕ್ಕೆ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಭೇಟಿ ನೀಡಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಗ್ರಾಮಾಂತರ ಠಾಣಾಧಿಕಾರಿ.ಹರೀಶ್, ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್. ಐ.ಸಂಜೀವ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.