ನವದೆಹಲಿ, ಡಿ 12(SM): ಭಾರತದ ಮಾಜಿ ಪ್ರಧಾನಿ, ಅಜಾತಶತ್ರು, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಹೊಂದಿರುವ 100 ರೂ. ನಾಣ್ಯ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ 100 ರೂಪಾಯಿ ಮೌಲ್ಯದ ನಾಣ್ಯ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.
ನಾಣ್ಯ 35 ಗ್ರಾಂ ತೂಕ ಇರಲಿದ್ದು, ಇದರ ಮೇಲೆ ದೇವನಾಗರಿ ಹಾಗೂ ಇಂಗ್ಲಿಷ್ನಲ್ಲಿ ವಾಜಪೇಯಿ ಹೆಸರು ಮುದ್ರಣಗೊಳ್ಳಲಿದೆ. 1924ರಿಂದ 2018ರವರೆಗಿನ ಅವರ ಚಿತ್ರಗಳು ಇದರಲ್ಲಿ ಇರಲಿದ್ದು, ಜನ್ಮ ದಿನಾಂಕ ಹಾಗೂ ನಿಧನರಾದ ದಿನಾಂಕ ಕೂಡ ನಾಣ್ಯದಲ್ಲಿರಲಿದೆ.
ಈಗಾಗಲೇ ಚಲಾವಣೆಯಲ್ಲಿರುವ ನಾಣ್ಯಗಳ ಮೇಲೆ ಸತ್ಯಮೇವ ಜಯತೆ ಇದ್ದು, ಈ ನಾಣ್ಯದ ಮೇಲೆ 'ಭಾರತ' ಎಂದು ಮುದ್ರಣವಾಗಲಿದೆ. ಕಳೆದ ಆಗಸ್ಟ್ 16ರಂದು ಅಟಲ್ ಬಿಹಾರಿ ವಾಜಪೇಯಿ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರು 6 ವರ್ಷ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ನೀಡಲು ಈಗಾಗಲೇ ವಿವಿಧ ರಾಜ್ಯಗಳು ಕೆಲವೊಂದು ನಗರಗಳಿಗೆ ಅವರ ಹೆಸರು ಇಡುವುದಾಗಿ ಘೋಷಣೆ ಮಾಡಿದ್ದಾರೆ.