ಉಡುಪಿ, ಡಿ 13(SM): ಇತ್ತೀಚಿಗೆ ಹೊರ ಬಿದ್ದ ಪಂಚರಾಜ್ಯ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆಯ ಕರೆ ಘಂಟೆಯಾಗಿದೆ ಎಂದು ಪೇಜಾವರ ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ತಿಳಿಸಿದ್ದಾರೆ.
ಪಂಚ ರಾಜ್ಯಗಳ ಫಲಿತಾಂಶದ ಬಗ್ಗೆ ಮಾಧ್ಯಮದೊಂದಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಆರ್ಥಿಕ ಸುಧಾರಣೆ ಮತ್ತು ರಾಮಮಂದಿರಕ್ಕೆ ಪ್ರಧಾನಿ ಆದ್ಯತೆ ಕೊಡಬೇಕು. ಮಂದಿರ ನಿರ್ಮಾಣ ಹಿಂದೂ ಮತದಾರರ ಉತ್ಸಾಹವನ್ನು ಹೆಚ್ಚಿಸಬಹುದು.
ಇತರೆ ಮಿತ್ರ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು. ಸಮಾನ ವಿಚಾರಧಾರೆಯುಳ್ಳ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಬೇಕು. ಚಂದ್ರಬಾಬು ನಾಯ್ಡು ಅವರ ವಿರೋಧ ಕಟ್ಟಿಕೊಂಡರೆ ಬಿಜೆಪಿಗೆ ನಷ್ಟವಾಗಲಿದೆ. ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಬಗ್ಗುಬಡಿಯಲು ಹಠ ಹಿಡಿದಿದ್ದಾರೆ. ವಾಜಪೇಯಿಯ ನೀತಿಯನ್ನು ಪ್ರಧಾನಿ ಮೋದಿ ಅನುಸರಿಸಬೇಕು ಎಂದರು.
ಪ್ರಧಾನಿ ಮೋದಿ ಕೆಲವು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಮೋದಿ ಬಗ್ಗೆ ಮೊದಲಿದ್ದ ನಿರೀಕ್ಷೆ ಈಗ ಜನರು ಇಟ್ಟುಕೊಂಡಿಲ್ಲ. ಜನರು ನಿರೀಕ್ಷೆ ಇಟ್ಟಷ್ಟು ಕೆಲಸ ದೇಶದಲ್ಲಿ ಆಗಿಲ್ಲ. ನೋಟ್ ಬ್ಯಾನ್ ಫಲ ಜನಸಾಮಾನ್ಯರ ಕೈ ಸೇರಿಲ್ಲ ಎಂದರು.
ಇನ್ನು ಯೋಗಿ ಆದಿತ್ಯನಾಥ್ ಮುಂದಿನ ಪ್ರಧಾನಿ ಅಭ್ಯರ್ಥಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇಶಕ್ಕೆ ಮೋದಿಯೇ ಮುಂದಿನ ಪ್ರಧಾನಿಯಾಗಬೇಕು. ಸಿಎಂ ಯೋಗಿ ಮೋದಿಯಷ್ಟು ಸಮರ್ಥರಲ್ಲ. ಆದಿತ್ಯನಾಥರು ರಾಜಕಾರಣಿಯಲ್ಲ ಅವರು ಸಂತರು. ಯೋಗಿ ಆದಿತ್ಯ ನಾಥ್ ಉತ್ತರಪ್ರದೇಶದಲ್ಲಿ ಇಷ್ಟು ಮಾಡೂದೇ ವಿಶೇಷ ಎಂದರು.