ಕಾಸರಗೋಡು, ಡಿ 13(SM): ಶಬರಿಮಲೆ ವಿಷಯಕ್ಕೆ ಸಂಬಂಧಪಟ್ಟಂತೆ ತಿರುವನಂತಪುರ ಸಚಿವಾಲಯದ ಮುಂಭಾಗದಲ್ಲಿ ಬಿಜೆಪಿ ನಡೆಸುತ್ತಿರುವ ಸತ್ಯಾಗ್ರಹ ಕೇಂದ್ರದ ಮುಂಭಾಗದಲ್ಲಿ ವ್ಯಕ್ತಿಯೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವೇಣುಗೋಪಾಲ್ ಆತ್ಮಹತ್ಯೆ ಮಾಡಿಕೊಂಡವರು.
ಆತ್ಮಹತ್ಯೆ ಘಟನೆಯನ್ನು ಖಂಡಿಸಿ ನಾಳೆ ಕೇರಳದಲ್ಲಿ ಹರತಾಳಕ್ಕೆ ಬಿಜೆಪಿ ರಾಜ್ಯ ಸಮಿತಿ ಕರೆ ನೀಡಿದೆ. ಬೆಳಿಗ್ಗೆ ಆರರಿಂದ ಸಂಜೆ ಆರು ಗಂಟೆಯ ತನಕ ಹರತಾಳ ನಡೆಯಲಿದೆ.
ಬಿಜೆಪಿ ಕಾರ್ಯಕರ್ತರು ಸತ್ಯಾಗ್ರಹ ನಡೆಸುತ್ತಿರುವ ಕೇಂದ್ರದತ್ತ ಧಾವಿಸಿ ಬಂದ ವೇಣುಗೋಪಾಲ್ ಎಂಬ ವ್ಯಕ್ತಿಯು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದು, ಗಂಭೀರ ಸ್ಥಿತಿಯಲ್ಲಿ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಸಂಜೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಶಬರಿಮಲೆ ವಿವಾದಕ್ಕೆ ಸಂಬಂಧಪಟ್ಟಂತೆ ಕೇರಳ ಸರಕಾರದ ನಿಲುವು ಪ್ರತಿಭಟಿಸಿ ವೇಣುಗೋಪಾಲ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಜೆಪಿ ಆರೋಪಿಸಿದೆ.
ಆದರೆ ಕೃತ್ಯಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.