ವಿಶೇಷ ವರದಿ: ಹರ್ಷಿಣಿ ಉಡುಪಿ
ಉಡುಪಿ, ಫೆ 18 (DaijiworldNews/HR): ಕಳೆದ ಒಂದು ತಿಂಗಳಿಂದ ಹಿಜಾಬ್ ವಿವಾದ ಉಡುಪಿ ಜಿಲ್ಲೆಯಲ್ಲಿ ಹುಟ್ಟಿಕೊಂಡು ಇಂದು ಬೀದಿ ರಂಪಾಟವಾಗಿ ರಾಜ್ಯವಿಡೀ ಕಾಡ್ಗಿಚ್ಚಿನಂತೆ ಹಬ್ಬಿದೆ. ಸರಕಾರದ ದ್ವಂದ್ವ ತೀರ್ಮಾನದಿಂದ ಶಿಕ್ಷಣ ಸಂಸ್ಥೆಗಳು ಗೊಂದಲದ ಗೂಡಾಗಿವೆ. ಮಕ್ಕಳಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷದ ಮನೋಭಾವನೆ ಬೆಳೆಯತೊಡಗಿದೆ.
ಮೊದಲು ಉಡುಪಿಯ ಸರಕಾರಿ ಪಿಯು ಕಾಲೇಜಿನಿಂದ ಪ್ರಾರಂಭವಾದ ಮೇಲೆ ಈ ವಿವಾದ ಬೇರೆಯದೇ ಸ್ಪರೂಪ ಪಡೆಯಿತು, ಇಂದಿಗೂ ಆರದ ಬೆಂಕಿ ಅಲ್ಲಲ್ಲಿ ಒಳಗೊಳಗೆ ಭುಗಿಲೇಳುತ್ತಲೇ ಇದೆ.
ಹಿಜಾಬ್ ಕೇಸರಿ ರಾಜಕೀಯದ ನಡುವೆಯೂ ಗೆಳೆತನಕ್ಕೆ ಯಾವುದೇ ಧರ್ಮದ ಭೇದವಿಲ್ಲ ಎಂದು ಸಾರುವ ಕೆಲವೊಂದಿಷ್ಷು ಸಂದರ್ಭ ಉಡುಪಿ ಸರಕಾರಿ ಬಾಲಕಿಯರ ಶಾಲೆ ಸಾಕ್ಷಿಯಾಗಿತ್ತು.
ಇತ್ತೀಚೆಗೆ ರಾಜ್ಯದಲ್ಲಿ ಸಮವಸ್ತ್ರದ ಹೆಸರಿನಲ್ಲಿ ನಡೆಯುತ್ತಿರುವ ಮತೀಯ ಸಂಘರ್ಷಗಳು ಮುಗ್ಧ ಮಕ್ಕಳ ಮನಸ್ಸಿಗಳ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಇಂದು ದಾರಿಯಲ್ಲಿ ಹೋಗುವಾಗ ಏನಾಗುತ್ತೋ, ಶಾಲೆಯಲ್ಲಿ ಪರಿಸ್ಥಿತಿ ಹೇಗಿರುತ್ತೋ ಎನ್ನುವ ಆತಂಕದಲ್ಲಿ ಶಾಲೆಗೆ ಬರುವಂತಾಗಿದೆ.
ಒಂದು ಕಡೆ ಪರೀಕ್ಷೆ, ಇನ್ನೊಂದು ಕಡೆ ಪೋಲಿಸ್ ಕಾವಲು, ಮತ್ತೊಂದು ಕಡೆ ಕ್ಯಾಮರಾ ಕಣ್ಣುಗಳು. ಇದರ ನಡುವೆ ಅಂಜುತ್ತಲೇ ಬರುವ ಹಿಜಾಬ್ ಹಾಕಿದ ಅಥವಾ ಇತರ ವಿದ್ಯಾರ್ಥಿಗಳು.
ಆದರೆ ನಿನ್ನೆಯ ಆ ಸರಕಾರಿ ಬಾಲಕಿಯರ ಪ್ರೌಡ ಶಾಲೆಯಲ್ಲಿ ಮುಸ್ಲಿಮೇತರ ಹುಡುಗಿಯರು, ಹಿಜಾಬ್ ಹಾಕಿರುವ ತಮ್ಮ ಸಹಪಾಠಿಯನ್ನು ರಕ್ಷಿಸುವಂತೆ ಆಕೆಯ ಕೈಯನ್ನು ಬಿಗಿಯಾಗಿ ಹಿಡಿದು ಕೊಂಡು 'ನಿನ್ನ ಜೊತೆ ನಾವಿದ್ದೇವೆ' ಎನ್ನುವಂತೆ ನಡೆದು ಕೊಂಡು ಹೋಗುವ ದೃಶ್ಯ ಎಲ್ಲರಿಗೂ "ಧರ್ಮ ಸಾಮರಸ್ಯ" ಸಾರುವ ಸಂದೇಶ ನೀಡಿದಂತಿತ್ತು. ಸದ್ಯ ಈ ಚಿತ್ರ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುತ್ತಿದೆ.
ಇತ್ತಿಚೆಗೆ ಸ್ಕೂಲ್ ಕ್ಯಾಂಪಸ್ ನಲ್ಲಿ ಏನೇನೋ ಆತಂಕಕಾರಿ ಚಿತ್ರ ನೋಡುತ್ತಿರುವುದರ ಮಧ್ಯೆ ಈ ಅನ್ಯೋನ್ಯತೆ ಸಾರುವ ಚಿತ್ರ ಕಂಡು ಬಹುಶಃ ಸಮಾಜದ ಜನತೆ ಸ್ವಲ್ಪ ಮಟ್ಟಿಗೆ ಸಮಾಧಾನವಾಗಿರಬಹುದು.
ಶಿಕ್ಷಣ ಮತ್ತು ಧರ್ಮದ ನಡುವೆ ಸಂಘರ್ಷ ನಡೆಯುತ್ತಿರುವ ಈ ಕಾಲ ಘಟ್ಟದಲ್ಲಿ, ಇಂತಹ ಚಿತ್ರಗಳು ಸಾಮರಸ್ಯ ಭಾವನೆ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಸಮಾಜಕ್ಕೆ ಸಾರಿ ಸಾರಿ ಹೇಳುತ್ತವೆ. ಶಿಕ್ಷಣ ಸಂಸ್ಥೆಗಳು ಬಂದಾಗ ಅದರಲ್ಲಿ ಧರ್ಮ ಬಿತ್ತರಿಸುವ ಕೇಂದ್ರವಾಗಿರದೆ ಅದು ಶಿಸ್ತನ್ನು ಜೀವನ ಮೌಲ್ಯಗಳನ್ನು, ಸಾಮರಸ್ಯ ಹೇಳಿ ಕೊಡುವ, ಆತ್ಮವಿಶ್ವಾಸ ತುಂಬುವ ಕೇಂದ್ರವಾಗಬೇಕು. ಈ ಗೊಂದಲ ಪರಿಸ್ಥಿತಿ ಎಲ್ಲಿಯವರೆಗೆ ಮುಂದುವರೆಯುತ್ತೋ, ಆದರೂ ಸದ್ಯಕ್ಕೆ ಮಕ್ಕಳಿಗೆ ಸಾಮರಸ್ಯದ ಸಮಾಧಾನದ ಮಾತುಗಳು ಅಗತ್ಯವಾಗಿ ಬೇಕಾಗಿದೆ.