ಬೆಳ್ತಂಗಡಿ,ಡಿ 13(MSP): ನಾಗ ಸಾನಿಧ್ಯವಿರುವ ತಾಲೂಕಿನ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರಸ್ವಾಮಿ ದೇವಳದಲ್ಲಿ ವೈಭವದ ಷಷ್ಠೀ ಮಹೋತ್ಸವದ ಪ್ರಯುಕ್ತ ಶ್ರೀ ದೇವರ ಬ್ರಹ್ಮರಥೋತ್ಸವ ನಡೆಯಿತು. ನಾನಾ ಕಡೆಗಳಿದ್ದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತರುಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ವೇದಮೂರ್ತಿ ದೇರೆಬೈಲು ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನಡೆದವು. ಗುರುವಾರ ಬೆಳಗ್ಗೆ 7 ರಿಂದ ಷಷ್ಠಿ ಉತ್ಸವ ಪ್ರಾರಂಭವಾಗಿ, ಪೂರ್ವಾಹ್ನ 11 ಕ್ಕೆ ಬ್ರಹ್ಮರಥೋತ್ಸವ ನಡೆಯಿತು. ಅಪರಾಹ್ನ 12.30 ಕ್ಕೆ ಮಹಾಪೂಜೆ, ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಮಹಾ ಅನ್ನ ಸಂತರ್ಪಣೆಯನ್ನು ಸ್ವೀಕರಿಸಿದರು. ರಾತ್ರಿ ಅತ್ತಾಳ ಪೂಜೆ, ದರ್ಶನ ಬಲಿ ಉತ್ಸವ ನಡೆಯಿತು.
ಷಷ್ಠೀ ಹಿಂದಿನ ದಿನ ಬುಧವಾರದಂದು ಬೆಳಗ್ಗೆ 8 ಗಂಟೆಗೆಕೊಪ್ಪರಿಗೆ ಮೂಹೂರ್ತ, ಅಂಗಪ್ರದಕ್ಷಿಣೆ ನಡೆಯಿತು. ಸಾಂಸ್ಕೃತಿಕಕಾರ್ಯಕ್ರಮವಾಗಿ ಪುಂಜಾಲಕಟ್ಟೆ ವಿದ್ವಾನ್ ಗೋಪಾಲಕೃಷ್ಣ ಮತ್ತು ಬಳಗದವರು ಕೊಳಲುವಾದನ ನಡೆಸಿಕೊಟ್ಟರು. ಮಧ್ಯಾಹ್ನ ಮಹಾಪೂಜೆ, ಬಳಿಕ ಅನ್ನ ಸಂತರ್ಪಣೆ, ರಾತ್ರಿರಂಗ ಪೂಜೆ, ಪಂಚಮಿ ಉತ್ಸವ ನಡೆಯಿತು. ಶುಕ್ರವಾರದಂದು ಮಹಾ ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಲಿದೆ.