ಮಂಗಳೂರು, ಫೆ 17 (DaijiworldNews/KP): ನಗರದ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ಮಾ. 2 ರಂದು ನಡೆಯಲಿದೆ.
ಈ ಬಗ್ಗೆ ಮಂಗಳೂರು ನಗರ ಆಯುಕ್ತರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಚುನಾವಣೆಯು ಮಾ.02ರಂದು ಮಧ್ಯಾಹ್ನ 1 ಗಂಟೆಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ನಡೆಯುವ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆ ಪ್ರಾರಂಭದಿಂದ ಮುಕ್ತಾಯವಾಗುವವರೆಗೆ ಯಾವುದೇ ಛಾಯಾ ಚಿತ್ರಣ ಮತ್ತು ವೀಡಿಯೋ ಚಿತ್ರೀಕರಣ ಮಾಡದಂತೆ ಮಹಾನಗರಪಾಲಿಕೆ ಆಯುಕ್ತರು ಸೂಚಿಸಿರುತ್ತಾರೆ.
ಇನ್ನು ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್-ಉಪಮೇಯರ್ ಚುನಾವಣೆಗೆ ದಿನ ನಿಗದಿಯಾದ ಹಿನ್ನಲೆಯಲ್ಲಿ ಪಾಲಿಕೆಯಲ್ಲಿ ರಾಜಕೀಯ ಚರ್ಚೆಗಳು ಗರಿಗೆದರಿವೆ. ಮುಂದಿನ ಮೇಯರ್ ಯಾರು ಎಂಬ ಕುರಿತು ಬಹಿರಂದ ಮಾತುಕತೆಯು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಬಿಜೆಪಿ ಪಕ್ಷದೊಳಗೆ ಈ ಬಗ್ಗೆ ಚರ್ಚೆಗೆ ವೇದಿಕೆ ಸಿದ್ಧಗೊಂಡಿದೆ.
ಆಕಾಂಕ್ಷಿಗಳು ತಮ್ಮ ವ್ಯಾಪ್ತಿಯ ಲಾಬಿ ನಡೆಸಲು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದಿನ ಮೇಯರ್ ಅಭ್ಯರ್ಥಿ ಆಯ್ಕೆಯ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ ಭರತ್ ಶೆಟ್ಟಿ ಸೇರಿದಂತೆ ಬಿಜೆಪಿಯ ಮುಖಂಡರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.
2022-23ನೇ ಸಾಲಿಗೆ ಮೇಯರ್/ಉಪ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ ’ಎ’ ಮಹಿಳಾ ಮೀಸಲಾತಿ ಅಂತಿಮಗೊಂಡಿದೆ. ಇನ್ನು ಕಳೆದ ವರ್ಷ ಮಾರ್ಚ್ 2ರಂದು ಮೇಯರ್ ಸ್ಥಾನದ ಚುನಾವಣೆ ನಡೆದಿತ್ತು, ಈ ಹಿನ್ನಲೆಯಲ್ಲಿ ಈ ಬಾರಿಯೂ ಇದೇ ಸಮಯದಲ್ಲಿ ಚುನಾವಣೆ ನಡೆಯಲಿದೆ.
ಇನ್ನು ಹಾಲಿ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಅಧಿಕಾರಾವಧಿ ಫೆ. 28ರಂದು ಕೊನೆಗೊಳ್ಳಲಿದ್ದು. ಈ ಹಿನ್ನೆಲೆಯಲ್ಲಿ ನೂತನ ಮೇಯರ್ ಆಯ್ಕೆ ಮಾರ್ಚ್ 2ರಂದು ನಿಗದಿಯಾಗಿದೆ.
ಕಳೆದ ಬಾರಿ ಮಂಗಳೂರು ಪಾಲಿಕೆ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್ಡಿಪಿಐ 2 ಸ್ಥಾನ ಪಡೆದುಕೊಂಡಿತ್ತು.