ಬೈಂದೂರು,ಡಿ 13(MSP): ನಾವುಂದ-ಹೇರೂರು ಗಡಿ ಭಾಗದ ಕುದ್ರುಕೋಡು ಎಂಬಲ್ಲಿ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪನಿ ಐಆರ್ಬಿ ನಡೆಸುತ್ತಿರುವ ಜಲ್ಲಿ-ಟಾರು ಮಿಶ್ರಣ ಘಟಕದ ವಿರುದ್ಧ ಅಲ್ಲಿನ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಅಲ್ಲಿ ಜಲ್ಲಿ ಕ್ರಶ್ ಮಾಡಿ ಹುಡಿ ತಯಾರಿಸುವುದರಿಂದ ಮತ್ತು ಜಲ್ಲಿ-ಟಾರು ಮಿಶ್ರಣ ಮಾಡುವುದರಿಂದ ಪರಿಸರ ಕಲುಷಿತವಾಗಿ ನಿವಾಸಿಗಳ ಆರೋಗ್ಯ ಕೆಡುತ್ತಿದೆ, ಜಲ್ಲಿಹುಡಿ ನೀರಿನೊಂದಿಗೆ ಕೃಷಿ ಭೂಮಿಗೆ ಹರಿದು ಹಾಗೂ ಹಾರಿಬಂದು ಕೃಷಿಗೆ ಹಾನಿಯಾಗುತ್ತಿದೆ ಹಾಗೂ ಯಂತ್ರದ ಕಂಪನದಿಂದ ಮನೆಗಳ ಗೋಡೆ, ಮಾಡು ಬಿರುಕು ಬಿಡುತ್ತಿವೆ ಎನ್ನುವುದು ಅವರ ಪ್ರತಿಭಟನೆಗೆ ಕಾರಣ.
ಸ್ಥಳಕ್ಕೆ ಹೋದ ಮಾಧ್ಯಮ ವರದಿಗಾರರಿಗೆ ಘಟಕದ ಆವರಣದಲ್ಲಿ ಜಲ್ಲಿ ಮತ್ತು ಅದರ ಹುಡಿಯ ಬೆಟ್ಟದ ದರ್ಶನವಾಯಿತು. ಸುಮಾರು 250 ಮೀಟರು ದೂರದಲ್ಲಿರುವ ಮೂಕಾಂಬಿಕಾ ದೇವಾಡಿಗ ಎಂಬವರ ಮನೆಯ ಗೋಡೆ ಮತ್ತು ಮಾಡಿನ ಸ್ಲ್ಯಾಬ್ನಲ್ಲಿ ಯಂತ್ರದ ಕಂಪನದಿಂದ ಆಗಿದೆ ಎನ್ನಲಾದ ಕ್ಷೀಣ ಬಿರುಕುಗಳು, ಸಸ್ಯದ ಎಲೆಗಳ ಮೇಲೆ ಕುಳಿತ ಕುಳಿತ ಹುಡಿ ಹಾಗೂ ಮೆತ್ತೆ ಗೋವಿಂದ ಖಾರ್ವಿ ಎಂಬವರ ಜಮೀನಿನ ಒಂದೆಡೆ ಹುಡಿ ಹರಡಿಕೊಂಡಿರುವುದು ಕಂಡುಬಂದುವು.
ಪ್ರತಿಭಟನೆಯ ನೇತೃತ್ವ ವಹಿಸಿರುವ ನಾಗೇಂದ್ರ ದೇವಾಡಿಗ ಇವೆಲ್ಲ ನಾಲ್ಕು ವರ್ಷಗಳಿಂದ ಘಟಕದಲ್ಲಿ ನಡೆಯುತ್ತಿರುವ ಚಟುವಟಿಕೆಯ ಫಲ ಎಂದರು. ’ಘಟಕದ ಇಬ್ಬರು ಕಾರ್ಮಿಕರು ಕಾಯಿಲೆಯಿಂದ ಮೃತರಾಗಿದ್ದಾರೆ. ಸುತ್ತಲಿನ ನಿವಾಸಿಗಳಲ್ಲಿ ಮೂಕಾಂಬಿಕಾ ದೇವಾಡಿಗ (65), ಗಣೇಶ ದೇವಾಡಿಗ (42), ನಾಗ (80), ಚಂದಮ್ಮ ಶೆಡ್ತಿ (70), ಜೈರಾಮ (52), ಸೀತಾ (50), ಜಲಜಾ (52), ಆದರ್ಶ (14), ಕುಷ್ಟಪ್ಪ ಶೆಟ್ಟಿ (70), ವನಜಾ (65), ರವಿ ಶೆಟ್ಟಿ (62), ಆರ್ಯ (4), ರಾಮ ಜಿ. ಖಾರ್ವಿ (40), ಗಿರಿಜಾ (50), ಚಂದ್ರಾವತಿ (30), ಶೇಷಮ್ಮ(70), ಸಾಧಮ್ಮ (70) ಮತ್ತು ನಾರಾಯಣ ಶೆಟ್ಟಿ (75) ಉಬ್ಬಸ ಸೇರಿದಂತೆ ವಿವಿಧ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸನಿಹದ ತೆಂಗು, ಅಡಿಕೆ, ಕಾಳು ಮೆಣಸಿನ ಬೆಲೆಗಳಿಗೆ ಹಾನಿಯಾಗಿದೆ. ರಾಮ ಗೋವಿಂದ ಖಾರ್ವಿ ಅವರ ಬಾವಿಯ ನೀರಿಗೆ ಹುಡಿ ಬೆರೆತಿದೆ’ ಎಂದು ಹೇಳಿದರು. ಘಟಕದ ವಿರುದ್ಧ ನಾವುಂದ ಗ್ರಾಮ ಪಂಚಾಯಿತಿಗೆ, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ನೀಡಿರುವ ದೂರುಗಳ ಪ್ರತಿಗಳನ್ನು ತೋರಿಸಿದರು. ’ಘಟಕವನ್ನು ತಕ್ಷಣ ಮುಚ್ಚಬೇಕು, ಆಗಿರುವ ಹಾನಿಗೆ ಕಂಪನಿ ಪರಿಹಾರ ನೀಡಬೇಕು ಎನ್ನುವುದು ತಮ್ಮ ಆಗ್ರಹ’ ಎಂದರು. ಯಾವುದೇ ಅಧಿಕಾರಿ ಸ್ಥಳಕ್ಕೆ ಬಾರದ್ದರಿಂದ ಪ್ರತಿಭಟನೆ ನಿಲ್ಲಿಸಿದ ಜನರು ಅಧಿಕಾರಿಗಳಿಗೆ ತಿಳಿಸಿ ಇನ್ನೊಮ್ಮೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ಬೈಂದೂರು ಎಸ್ಐ ತಿಮ್ಮೇಶ್ ಬಿ. ಎನ್ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು ಸುರಕ್ಷತಾ ಕ್ರಮ ಕೈಗೊಂಡರು.
ಗ್ರಾಪಂನಿಂದ ಎನ್ಒಸಿ ರದ್ದು : ಸ್ಥಳಕ್ಕೆ ಬಂದಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಮತ್ತು ವಾರ್ಡ್ ಸದಸ್ಯ ಪ್ರಕಾಶ ದೇವಾಡಿಗ ’ಸಾರ್ವಜನಿಕರ ದೂರನ್ನು ಅನುಲಕ್ಷಿಸಿ ಮೂರು ವರ್ಷಗಳ ಹಿಂದೆ ಪಂಚಾಯಿತಿ ಕಂಪನಿಗೆ ಹಾಟ್ ಮಿಕ್ಸ್, ವೆಟ್ ಮಿಕ್ಸ್, ರೆಡಿ ಮಿಕ್ಸ್ ಮತ್ತು ಕಾಂಕ್ರೀಟ್ ಪ್ಲಾಂಟ್ಗೆ ಮತ್ತು ವಿದ್ಯುತ್ ಸಂಪರ್ಕಕ್ಕೆ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಪ್ರಸಕ್ತ ವರ್ಷದಿಂದ ರದ್ದು ಪಡಿಸಲಾಗಿದೆ. ಕಂಪನಿ ಪಡೆದಿದ್ದ ನಿವೇಶನದ ಲೀಸ್ ಅವಧಿಯೂ ಮುಗಿದಿದೆ. ಆದರೂ ಘಟಕ ಕಾರ್ಯಾಚರಿಸುತ್ತಿದೆ. ಪಂಚಾಯಿತಿಯ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದರು.
ಉತ್ಪ್ರೇಕ್ಷಿತ ಆರೋಪ : ಸಾರ್ವಜನಿಕರ ದೂರಿನಲ್ಲಿನ ಆರೋಪಗಳು ಉತ್ಪ್ರೇಕ್ಷಿತ ಎನ್ನುವುದು ಗುತ್ತಿಗೆದಾರ ಕಂಪನಿಯ ಯೋಜನಾ ವ್ಯವಸ್ಥಾಪಕ ಯೋಗೇಂದ್ರಪ್ಪ ಅವರ ನಿಲುವು. ’ಘಟಕ ಆರಂಭಿಸುವ ಮುನ್ನ ಪರಿಸರ ಸಂರಕ್ಷಣಾ ಇಲಾಖೆ ಮತ್ತು ಸ್ಥಳೀಯಾಡಳಿತದ ನಿರಾಕ್ಷೇಪಣಾ ಪತ್ರದ ಆಧಾರದಲ್ಲಿ ಜಿಲ್ಲಾಡಳಿತದಿಂದ ಅನುಮತಿ ಪಡೆಯಲಾಗಿದೆ. ಎರಡು ವರ್ಷಗಳ ಹಿಂದೆ ಕಂಪನಿ ವಾಹನಗಳ ಓಡಾಟದಿಂದ ರಸ್ತೆ ಹಾಳಗಿದೆ ಎಂದು ಜನರು ಪ್ರತಿಭಟಿಸಿದಾಗ ರೂ 25 ಲಕ್ಷ ವೆಚ್ಚದಲ್ಲಿ ರಸ್ತೆಗೆ ಟಾರು ಹಾಕಲಾಯಿತು. ಈಗ ಇಲ್ಲಿನ ಘಟಕದಲ್ಲಿ ಕಲ್ಲು ಒಡೆಯುವುದನ್ನು ನಿಲ್ಲಿಸಿ, ಮುರ್ಡೇಶ್ವರದಿಂದ ತಂದ ಜಲ್ಲಿ ಮತ್ತು ಹುಡಿಯನ್ನು ಇಲ್ಲಿ ಸಂಗ್ರಹಿಸಲಾಗುತ್ತಿದೆ. ಕುಂದಾಪುರ-ಶಿರೂರು ನಡುವಿನ ಹೆದ್ದಾರಿ ವಿಸ್ತರಣಾ ಕಾಮಗಾರಿ ಇನ್ನು ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಆಗ ಇಲ್ಲಿನ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು. ಖಾಸಗಿ ಜಮೀನಿನಲ್ಲಿ ಹರಡಿರುವ ಹುಡಿಯನ್ನು ತೆಗೆಯಲಾಗುವುದು’ ಎಂದು ಅವರು ಹೇಳಿದರು.