ಉಡುಪಿ, ಡಿ 13(MSP): ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸಹಿಯನ್ನು ನಕಲು ಮಾಡಿ ವಂಚಸಿದ್ದ ಉಡುಪಿಯ ಕೊಡವೂರು ಮೂಡಬೆಟ್ಟಿನ ನಿರಂಜನ್ ಚಿದಾನಂದ ಭಟ್ (37) ಗೆ ಉಡುಪಿ ಉಡುಪಿ ಜಿಲ್ಲಾ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ 3 ವರ್ಷ ಕಠಿಣ ಸಜೆ ಹಾಗೂ 7ಸಾವಿರ ದಂಡ ವಿಧಿಸಿದೆ. ಈತ ಅಬ್ದುಲ್ ಕಲಾಂ ಅವರ ಸಹಿಯನ್ನು ನಕಲು ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವರಿಗೆ ವಂಚನೆ ಮಾಡಿದ್ದಾನೆ.
ಕೆಲ ವರ್ಷಗಳ ಹಿಂದೆ ಆರೋಪಿಯು ಕರಾವಳಿ ಬೈಪಾಸ್ ಬಳಿ ಇರುವ ಸೈಬರ್ ಕೆಫೆಯಲ್ಲಿ ಅಬ್ದುಲ್ ಕಲಾಂ ಅವರ ಇ ಮೇಲ್ ಐಡಿಯಂತೆಯೇ ಇನ್ನೊಂದು ಇ- ಮೇಲ್ apj_abdulkalam@in.co ಎಂಬ ಹೆಸರಿನಲ್ಲಿ ಖಾತೆ ತೆರೆದಿದ್ದ.
ಆ ಬಳಿಕ ಈತ ಅಬ್ದುಲ್ ಕಲಾಂ ಅವರಿಗೆ ಅಭಿನಂದನಾ ಪತ್ರವೊಂದನ್ನು ಕಳುಹಿಸಿದ್ದ. ಇದಕ್ಕೆ ಪ್ರತಿಯಾಗಿ ಕಲಾಂ ಅವರು ಕೃತಜ್ಞತಾ ಪತ್ರ ಕಳುಹಿಸಿದ್ದರು.ಅದರಲ್ಲಿ ಡಾ|ಕಲಾಂ ಅವರ ಸಹಿ ಇತ್ತು. ಕೃತಜ್ಞತಾ ಪತ್ರದಲ್ಲಿದ್ದ ಸಹಿಯನ್ನು ನಕಲು ಮಾಡಿದ ಆರೋಪಿ, ಅಮೆರಿಕನ್ ಎಂಜಿನಿಯರಿಂಗ್ ಆರ್ಗನೈಸೇಶನ್ ಕೊಡಮಾಡುವ ಹೂವೇರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ, ಪ್ರಶಸ್ತಿಗೆ ಕಲಾಂ ಅವರೇ ಶಿಫಾರಸು ಮಾಡಿರುವಂತೆ ನಕಲಿ ಶಿಫಾರಸು ಪತ್ರವನ್ನು ಹಾಕಿದ್ದ.
ಜತೆಗೆ, ಎಪಿಜೆ ಅಬ್ದುಲ್ ಕಲಾಂ ಹೆಸರಿನ ಐಡಿಯಿಂದ ನ್ಯೂಯಾರ್ಕ್ನ ಗೋಸ್ವಾಮಿ ಡಿ.ಯೋಗಿ ಎಂಬುವರಿಗೆ ಇ–ಮೇಲ್ ಕಳುಹಿಸಿ, ಭಾರತದಲ್ಲಿರುವ 50 ಎಂ.ಡಬ್ಲ್ಯು ಸೋಲಾರ್ ಥರ್ಮಲ್ ಪ್ರಾಜೆಕ್ಟ್ನ ವರದಿ ಕಳುಹಿಸುವಂತೆ ಒತ್ತಾಯಿಸಿದ್ದ. ಅಲ್ಲದೆ ಡಾ|ಅಬ್ದುಲ್ ಕಲಾ ಎಂದು ವ್ಯವಹರಿಸಿ ರಾಷ್ಟ್ರಪತಿಯವರ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆಯುಂಟು ಮಾಡಿದ್ದ. ಈ ವಿಚಾರ ಗುಪ್ತಚರ ವಿಭಾಗಕ್ಕೆ ತಿಳಿದು ಈ ಬಗ್ಗೆ 2010 ರಲ್ಲಿ ಉಡುಪಿ ಅಪರಾಧ ಗುಪ್ತವಾರ್ತೆ ವಿಭಾಗದ ಇನ್ಸ್ ಪೆಕ್ಟರ್ ಶ್ರೀನಿವಾಸ್ ರಾಜ್ ದೂರು ನೀಡಿದ್ದರು.ವಿಚಾರಣೆ ವೇಳೆ ಆರೋಪಿ ತಪ್ಪೆಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮಂಜುನಾಥ್ ಅವರು ಶಿಕ್ಷೆ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಹಿಂದಿನ ಸಹಾಯಕ ಸರ್ಕಾರಿ ಅಭಿಯೋಜಕ ಮಮ್ತಾಜ್ ಮತ್ತು ಈಗಿನ ಸಹಾಯಕ ಸರ್ಕಾರಿ ಅಭಿಯೋಜಕಿ ಕೆ.ಜಯಂತಿ ವಾದ ಮಂಡಿಸಿದ್ದರು.