ಮೂಡುಬಿದಿರೆ, ಡಿ 12(SM): ಮುಂದಿನ ಚುನಾವಣೆಗೆ ನಾನು ಸ್ಪರ್ಧಿಯಲ್ಲ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಯುವ ಜನಾಂಗಕ್ಕೆ ಅವಕಾಶ ನೀಡಬೇಕು. ಆನಿಟ್ಟಿನಲ್ಲಿ ದೇಶದ ಅಭಿವೃದ್ಧಿ ಸಾಧ್ಯ. ಚುನಾವಣೆಗಳಲ್ಲಿ ಬೇರೆ ಬೇರೆ ಬದಲಾವಣೆಗಳಾಗಿದ್ದೂ ಕಾಂಗ್ರೆಸ್ ನ ಜನಪರ ಚಿಂತನೆಗಳು ಹಾಗೆಯೇ ಮುಂದುವರಿಯಲಿವೆ ಎಂದರು.
ಬಿಜೆಪಿಯ ನೋಟು ಅಪಮೌಲ್ಯೀಕರಣ ಕ್ರಮದಿಂದಾಗಿ ಜನಸಾಮಾನ್ಯರ ಬದುಕು ಕಷ್ಟದಲ್ಲಿ ಸಿಲುಕಿದ್ದು ಕಾಳಧನದ ನೆಪದಲ್ಲಿ ಬಡವರ ಬಾಳಿಗೆ ತೊಂದರೆಯಾಗಿದೆ. ಸರ್ವಾಧಿಕಾರ ಮನೋಭಾವವೇ ಬಿಜೆಪಿಯ ಸೋಲಿಗೆ ಕಾರಣವಾಗಿದ್ದು, ಕಾಂಗ್ರೆಸಿಗರು ಎಲ್ಲಿಯೂ ಬಿಜೆಪಿ ಮುಕ್ತ ಭಾರತ ಎಂಬುದನ್ನು ತಿಳಿಸಿಲ್ಲ. ಯಾಕೆಂದರೆ ಪ್ರಜಾಪ್ರಭುತ್ವದ ಯಶಸ್ಸಿಗೆ ವಿರೋಧ ಪಕ್ಷ ಅಗತ್ಯವಾಗಿದೆ ಎಂದು ಹೇಳಿದರು.
ಮತದಾರರು ಮುಂದಿನ ಲೋಕಸಭೆಯ ಚುನಾವಣಾ ಫಲಿತಾಂಶವನ್ನು ಪಂಚರಾಜ್ಯದ ಚುನಾವಣಾ ಫಲಿತಾಂಶದಲ್ಲಿ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಸಾಮರ್ಥ್ಯವನ್ನು ಈ ಚುನಾವಣೆಯ ಮೂಲಕ ತೋರ್ಪಡಿಸಿದೆ ಎಂದು ಜೈನ್ ಹೇಳಿದರು. ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ತಾಳ್ಮೆಗೆಡದೆ ದೇಶದಾದ್ಯಂತ ಸಂಚರಿಸಿದುದರ ಪರಿಣಾಮ ಈ ಗೆಲುವು ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಎಂದು ಧ್ವನಿಯೆತ್ತುವವರಿಗೆ ಕಾಂಗ್ರೆಸ್ ಮುಕ್ತ ಸರ್ಕಾರ ರಚಿಸುವುದು ಅವರ ಆಯುಷ್ಯದಲ್ಲಿ ಸಾಧ್ಯವಿಲ್ಲ ಎಂದರು.
ಸತತ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಎಂದೂ ಮಂತ್ರಿಗಿರಿಗೆ ಆಸೆಪಡದೆ ನಿಸ್ವಾರ್ಥವಾಗಿ, ಪಕ್ಷನಿಷ್ಠೆಯನ್ನು ಮೆರೆದ ಪ್ರತಾಪ್ ಚಂದ್ರ ಶೆಟ್ಟಿ ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಆಯ್ಕೆ ಎಂದು ಅಭಿನಂದಿಸಿದರು.