ಕಾರ್ಕಳ, ಫೆ. 07 (DaijiworldNews/SM): ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕ್ ಸವಾರನೊಬ್ಬರು ಕಾರಿಗೆ ಡಿಕ್ಕಿ ಹೊಡೆದು ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಸಾವಿಗೀಡಾದ ಘಟನೆ ಸಂಭವಿಸಿದೆ.
ಫೆಬ್ರವರಿ 5ರ ರಾತ್ರಿ ಸುಮಾರು 7 ಗಂಟೆಗೆ ಈ ಘಟನೆ ನಡೆದಿದ್ದು, ದಿನೇಶ್ ಗೌಡ(32) ಮೃತಪಟ್ಟವರು. ಕಾರ್ಕಳದಿಂದ ಮೂಡುಬಿದ್ರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ತನ್ನ ಬೈಕ್ನಲ್ಲಿ ಹೋಗುತ್ತಿದ್ದರು.
ಸಾಣೂರು ಗ್ರಾಮದ ಸೀಡ್ ಫಾರ್ಮ್ ಸಮೀಪಕ್ಕೆ ತಲುಪುತ್ತಿದ್ದಂತೆ ಬೈಕ್ ರಸ್ತೆಯ ಎಡಬದಿಗೆ ಹೋಗದೇ ಬಲಬದಿಗೆ ಚಲಾಯಿಸಿ ಹೋಗಿರುವುದೇ ಘಟನೆಗೆ ಕಾರಣವಾಗಿದೆ. ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ರಸ್ತೆಗೆ ಬಿದ್ದು, ಎಡಕಾಲಿನ ಹಾಗೂ ಎಡಕೈ ಮೂಳೆ ಮುರಿತಕೊಳ್ಳಗಾಗಿ ತಲೆಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಫೆಬ್ರವರಿ 6ರ ಸಂಜೆ 5.58 ಗಂಟೆಗೆ ಮೃತಪಟ್ಟಿರುತ್ತಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.