ಕಾರ್ಕಳ, ಫೆ 05 (DaijiworldNews/KP): ಇತ್ತೀಚೆಗೆ ಕಾರ್ಕಳದ ಅಜೆಕಾರ್ ನಲ್ಲಿ ಡಾ.ಶೇಖರ್ ಅಜೆಕಾರ್ ಇವರು ಕಳೆದ 23 ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಆದಿ ಗ್ರಾಮೋತ್ಸವ ಎಂಬ ವಿಶೇಷ ಕಾರ್ಯಕ್ರಮವು ಅದ್ದೂರಿಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಉದ್ಯೋಗಿ ಮಂಗಳೂರಿನ ರಶ್ಮಿ ಸನಿಲ್ ಇವರಿಗೆ ಬಹುಮುಖ ಪ್ರತಿಭೆಗಾಗಿ " ಆದಿಗ್ರಾಮೋತ್ಸವ ಯುವಸಿರಿ ಗೌರವ" ನೀಡಿ ಸನ್ಮಾನಿಸಲಾಯಿತು.
ರಶ್ಮಿ ಮೂಲತಃ ಮಂಗಳೂರಿನ, ಕೊಲ್ಯ ಸೋಮೆಶ್ವರದ ದಿವಂಗತ ಶ್ರೀ ಕೃಷ್ಣ ಕೊಟ್ಯಾನ್ ಹಾಗೂ ಶ್ರೀಮತಿ ನವೀನ ಕುಮಾರಿ ದಂಪತಿಯ ಪುತ್ರಿ, ಮಂಗಳೂರಿನ ಖ್ಯಾತ ಕ್ರಿಕೆಟ್ ಆಟಗಾರ ನಿತೇಶ್ ಕೋಟ್ಯಾನ್ ಅವರ ಧರ್ಮಪತ್ನಿಯಾಗಿರುವ ಇವರು ಸದ್ಯ ಎಂ. ಕಾಮ್ ಪದವೀಧರೆಯಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಮತ್ತು ತುಳು ಭಾಷೆಯ ಮೇಲೆ ಹಿಡಿದ ಹೊಂದಿರುವ ರಶ್ಮಿ ನೂರಾರು ಕವನಗಳನ್ನು ರಚಿಸಿ ಮನೆ ಮಾತಾದವರು, 70 ಕ್ಕೂ ಹೆಚ್ಚು ಅಂತರ್ಜಾಲ ಹಾಗೂ ನೇರ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಪ್ರೌಢಿಮೆ ತೋರಿರುವ ಇವರು ತನ್ನ ಕವನಗಳಿಗಾಗಿ 300 ಕ್ಕೂ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ, ಅಲ್ಲದೆ ಮೂರು ರಾಜ್ಯ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ರಶ್ನಿಯವರು ಲೇಖಕಿಯಾಗಿ, ಬರಹಗಾರ್ತಿಯಾಗಿ, ನೃತ್ಯಪಟುವಾಗಿ, ನಿರೂಪಕಿಯಾಗಿಯೂ ಗಮನಸೆಳೆದವರು. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಕೂಡ ಆಗಿದ್ದು. ಯುವವಾಹಿನಿ, ರೋಟರಿ, ಮಹಿಳಾ ಮಂಡಳಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್, ಕಥಾಬಿಂದು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ, ಪುತ್ತೂರು ಸಾಹಿತ್ಯ ವೇದಿಕೆ ನವಚೇತನ ಸೇವಾ ಬಳಗ (ರಿ). ತೋಡಾರು ಮೊದಲಾದ ಪ್ರತಿಷ್ಠಿತ ಸಂಸ್ಥೆಗಳ ಸದಸ್ಯೆಯಾಗಿ ಕಾರ್ಯ ನಿರ್ವಾಹಿಸುತ್ತಿದ್ದಾರೆ.
ಆದಿ ಗ್ರಾಮೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ ಶೆಣೈ ಉಡುಪಿ,ಗೌರವಾಧ್ಯಕ್ಷರು ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಇವರು ವಹಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಪ್ರಶಸ್ತಿ ಪ್ರಧಾನ ಮಾಡಿದರು. ಹಾಗೂ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.