ಉಡುಪಿ, ಫೆ 04(DaijiworldNews/MS): ಕಡಿಯಾಳಿ ಬಳಿ ರಸ್ತೆ ದಾಟುತ್ತಿದ್ದ ಮೂವರು ಪಾದಚಾರಿಗಳಿಗೆ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಫೆ.03 ರ ಗುರುವಾರ ಸಂಜೆ ನಡೆದ ಘಟನೆ ಇದಾಗಿದ್ದು , ಓರ್ವ ಗರ್ಭಿಣಿ ಎನ್ನಲಾದ ಮಹಿಳೆ ಸಹಿತ ಮೂವರು ರಸ್ತೆಯ ಎಡಭಾಗದಿಂದ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಕಡೆಗೆ ರಸ್ತೆ ದಾಟುತ್ತಿದ್ದಾಗ ಅತಿವೇಗದಿಂದ
ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ಬಂದ ಇನ್ನೋವಾ ಕಾರು ಮೂವರಿಗೂ ಡಿಕ್ಕಿ ಹೊಡೆದಿದೆ. ಇನ್ನೋವ ಕಾರು ಡಿಕ್ಕಿಯಾದ ರಭಸಕ್ಕೆ ಮೂವರು ರಸ್ತೆಗೆ ಬಿದ್ದಿದ್ದು, ಗರ್ಭಿಣಿ ಮಹಿಳೆಯ ತಲೆಗೆ ತೀವ್ರತರದ ಗಾಯವಾಗಿದೆ ಎಂದು ತಿಳಿದುಬಂದಿದೆ.
ತಕ್ಷಣ ಕಾರು ಚಾಲಕನೇ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ
ಈ ದೃಶ್ಯಾವಳಿ ಅಲ್ಲೇ ಪಕ್ಕದ ಶೋರೂಮ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಾರು ಚಾಲಕನ ನಿರ್ಲಕ್ಷ್ಯ ತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.