ಮಂಗಳೂರು, ಫೆ 03 (DaijiworldNews/MS): ಪ್ಲಾಟ್ ಲೀಸ್ಗೆ ಕೊಡುವುದಾಗಿ ನಕಲಿ ದಾಖಲೆ ತೋರಿಸಿ, ಮಹಿಳೆಯೊಬ್ಬರಿಂದ 5 ಲಕ್ಷ ರೂ. ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಫೆ. 1ರಂದು ಬಂಧಿಸಿದ್ದಾರೆ.
ಬಂಧಿತರನ್ನು ವಾಮಂಜೂರಿನ ತೊಯಿಪೆ ಕಲ್ ನಿವಾಸಿ ದೀಪಕ್ ಸಾವಿಯೋ ಅಂದ್ರಾದೆ (31), ಹಾಗೂ ಪಳ್ನೀರ್ ಸ್ಟರಕ್ ರೋಡ್ ನ ಇಮ್ತಿಯಾಜ್ (43) ಎಂದು ಗುರುತಿಸಲಾಗಿದೆ
ಬೆಳ್ತಂಗಡಿ ಮೂಲದ ಪ್ರಿಯ ಎಂಬವರು , ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಕಳೆದ 2020ರ ಜೂನ್ ತಿಂಗಳಲ್ಲಿ ಇವರು ಬಾಡಿಗೆ ಮನೆ ಪಡೆಯಲು ಹುಡುಕಾಟದಲ್ಲಿದ್ದರು. ಈ ವೇಳೆ, ಕದ್ರಿ ಪರಿಸರದ ನಿವಾಸಿ ಪ್ರದೀಪ್ ಎಂಬ ಬ್ರೋಕರ್ ಪರಿಚಯ ಆಗಿದ್ದು, ಕೆ.ಎಸ್.ರಾವ್ ರಸ್ತೆಯ ಅಪಾರ್ಟ್ಮೆಂಟ್ ಒಂದರಲ್ಲಿ ನೆಲಮಹಡಿಯಲ್ಲಿ ಮನೆಯೊಂದು ಲೀಸ್ಗೆ ಇರುವುದಾಗಿ ತಿಳಿಸಿದ್ದಾನೆ.
ಮನೆಯನ್ನು ನೋಡಿದ ಮಹಿಳೆ, ಇಷ್ಟ ಆಗಿದ್ದರಿಂದ ಅದನ್ನು 5 ಲಕ್ಷ ರೂಪಾಯಿಗೆ ಲೀಸ್ಗೆ ಪಡೆಯಲು ಮುಂದಾಗಿದ್ದರು. ಅದರಂತೆ, ಬ್ರೋಕರ್ ಬ್ರಿಜೇಶ್ ಎಂಬಾತನನ್ನು ಮನೆ ಮಾಲೀಕ ಮುಹಮ್ಮದ್ ಅಶ್ರಫ್ ಎಂದು ತೋರಿಸಿದ್ದು ಅಗ್ರಿಮೆಂಟ್ ಮಾಡಿ 5 ಲಕ್ಷ ರೂ. ಡಿಪಾಸಿಟ್ ಮಾಡುವಂತೆ ಹೇಳಿದ್ದ. ಮಹಿಳೆ ಬಳಿಕ ಹಣ ಒಟ್ಟುಗೂಡಿಸಿ, ಮುಹಮ್ಮದ್ ಅಶ್ರಫ್ ಅವರ ಹೆಸರಿನ ಬ್ಯಾಂಕ್ ಖಾತೆಗೆ ವರ್ಗಾಯಿಸಿ ನಂತರ, ಎರಡೂ ಪಾರ್ಟಿಗಳಿಂದ ಲೀಸ್ ಅಗ್ರೀಮೆಂಟ್ ನಡೆದಿದ್ದು, ಮಹಿಳೆ ತನ್ನ ವಾಸವನ್ನು ಬದಲಿಸಿ ಅಲ್ಲಿಗೆ ಶಿಫ್ಟ್ ಮಾಡಿಕೊಂಡಿದ್ದರು.
ಆದರೆ, ಮೂರು ತಿಂಗಳ ನಂತರ ಮನೆಯ ನೈಜ ಮಾಲೀಕ ಮುಹಮ್ಮದ್ ಅಲಿ ಎಂಬಾವರು ಮನೆಗೆ ಬಂದು ಬಾಡಿಗೆ ಕೊಡುವಂತೆ ಒತ್ತಾಯಿಸಿದಾಗ ಮಹಿಳೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಹೀಗಾಗಿ ನಕಲಿ ಡಾಕ್ಯುಮೆಂಟ್ ಹೆಸರಲ್ಲಿ ವಂಚನೆ ಮಾಡಿರುವ ಬಗ್ಗೆ ಬಂದರು ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು
ವಂಚಕರು ಇದೇ ರೀತಿ ಹಲವರನ್ನು ಮೋಸ ಮಾಡಿರುವ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳು ಇದೇ ರೀತಿಯ ಮೂರು ಪ್ರಕರಣಗಳಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಬಂಧಿತರಾಗಿ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡಿದ್ದಾರೆ.