ಸುಳ್ಯ, ಫೆ 03 (DaijiworldNews/MS): ಏಳನೇ ತರಗತಿಯ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ.
ಬಾಲಕಿಯನ್ನು ಗುತ್ತಿಗಾರಿನ ಪೂಜಾರಿಕೋಡಿ ನಿವಾಸಿ ನ್ಯಾಯವಾದಿ ಹರೀಶ್ ಎಂಬವರ ಪುತ್ರಿ ನಿಹಾರಿಕಾ ( 13 ವರ್ಷ) ಎಂದು ಗುರುತಿಸಲಾಗಿದೆ.
ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಈಕೆ ಈ ಬಾರಿ ನವೋದಯ ಶಾಲೆಗೆ ಏಳನೇ ತರಗತಿಗೆ ಆಯ್ಕೆಯಾಗಿದ್ದಳು. ಕೊವೀಡ್ ಕಾರಣದಿಂದಾಗಿ ಶಾಲೆ ಆರಂಭಗೊಳ್ಳದೆ, ಮನೆಯಲ್ಲಿಯೇ ನವೋದಯದ ಶಾಲೆಯ ಆನ್ಲೈನ್ ತರಗತಿ ಹಾಜರಾಗುತ್ತಿದ್ದಳು. ಇನ್ನು ಒಂದೆರಡು ದಿನಗಳಲ್ಲಿ ನವೋದಯ ಶಾಲೆ ಪುನರಾರಂಭಗೊಳ್ಳಲಿತ್ತೆನ್ನಲಾಗಿದೆ.
ಇಂದು ಬೆಳಿಗ್ಗೆ ಹರೀಶ್ ಪೂಜಾರಿಕೋಡಿಯವರು ಮನೆಯಿಂದ ಹೊರಟು ಸುಳ್ಯದ ಕಡೆಗೆ ಬಂದ ಸ್ವಲ್ಪ ಹೊತ್ತಲ್ಲೇ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳೆನ್ನಲಾಗಿದೆ. ಮನೆಯಲ್ಲಿದ್ದವರಿಗೆ ವಿಷಯ ಗೊತ್ತಾಗಿ ತಕ್ಷಣ ಹೋಗಿ ಹಗ್ಗದಿಂದ ಕೆಳಗಿಳಿಸಿ, ಗುತ್ತಿಗಾರಿಗೆ ಆಸ್ಪತ್ರೆಗೆ ಕರೆತಂದರು. ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತು. ಆದರೆ ಅಲ್ಲಿಗೆ ತಲುಪಿದಾಗ ಬಾಲಕಿ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.