ಉಡುಪಿ, ಫೆ 03 (DaijiworldNews/HR): ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕೆಲ ಬಾಲಕಿಯರು ಹಾಗೂ ಕಾಲೇಜು ಆಡಳಿತ ಮಂಡಳಿ ನಡುವೆ ವಾಗ್ವಾದ ನಡೆದಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿ ನಾಲ್ಕು ವಾರಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಕುಂದಾಪುರ ಉಪವಿಭಾಗಾಧಿಕಾರಿ ಕೆ ರಾಜು ನೇತೃತ್ವದಲ್ಲಿ ಹಾಗೂ ಉಡುಪಿ ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ನೇತೃತ್ವದ ಸಮಿತಿಯ ಸದಸ್ಯರು ಫೆ.2ರಂದು ಬುಧವಾರ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಮಾನವ ಹಕ್ಕುಗಳ ಆಯೋಗದಿಂದ ಜಿಲ್ಲಾಡಳಿತಕ್ಕೆ ನೋಟಿಸ್ ಬಂದಿದೆ. ಹಾಗಾಗಿ ಹೊಸ ಸಮಿತಿಯನ್ನು ನೇಮಿಸಲಾಗಿದ್ದು, ವರದಿ ಬಂದ ತಕ್ಷಣ ಆಯೋಗಕ್ಕೆ ಸಲ್ಲಿಸಲಾಗುವುದು ಎಂದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ನೇತೃತ್ವದ ತ್ರಿಸದಸ್ಯ ಸಮಿತಿ ಕಾಲೇಜಿಗೆ ಭೇಟಿ ನೀಡಿತ್ತು. ಇದು ಕೆಲವು ವಿವರಗಳನ್ನು ಸಂಗ್ರಹಿಸಿದ್ದು, ಸಹಾಯಕ ಆಯುಕ್ತರ ನೇತೃತ್ವದ ಸಮಿತಿಯೂ ಪ್ರತ್ಯೇಕವಾಗಿ ಕಾಲೇಜಿಗೆ ಭೇಟಿ ನೀಡಿ ವರದಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.