ಮಂಗಳೂರು, ಫೆ 03 (DaijiworldNews/MS): ವಿಮಾನ ನಿಲ್ದಾಣದ ಟ್ರಾಲಿ ರಿಟ್ರೀವರ್ ಸಿಬ್ಬಂದಿಯ ಪ್ರಾಮಾಣಿಕತೆಯಿಂದ ಏರ್ ಪೋರ್ಟ್ ನಲ್ಲಿ ಮಹಿಳೆಯೊಬ್ಬರು ತಾವು ಕಳೆದುಕೊಂಡಿದ್ದ ವಜ್ರ ಖಚಿತ ಬಳೆಯನ್ನು ಮರಳಿ ಪಡೆದ ಘಟನೆ ಸೋಮವಾರ ನಡೆದಿದೆ.
ಮಹಿಳೆಯೊಬ್ಬರು ಬೆಂಗಳೂರಿನಿಂದ ತನ್ನ ಮನೆಗೆ ಬರುತ್ತಿದ್ದ ಸಂಬಂಧಿಯನ್ನು ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ವಿಮಾನ ನಿಲ್ದಾಣದಿಂದ ಹೊರಬಂದ ನಂತರ, ಬಳೆ ಕಳೆದುಹೋಗಿರುವುದನ್ನು ಅರಿವಿಗೆ ಬಂದು, ಬೆಂಗಳೂರಿನಿಂದ ಬಂದಿದ್ದ ಸಂಬಂಧಿಯಲ್ಲಿ ವಿಚಾರ ತಿಳಿಸಿದರು. ಅವರು ತಕ್ಷಣ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಗೆ ಮಾಹಿತಿ ನೀಡಿ ಪತ್ತೆ ಹಚ್ಚುವಂತೆ ಕೋರಿದ್ದರು.
ಇದೇ ವೇಳೇ ವಿಮಾನ ನಿಲ್ದಾಣದ ಟ್ರಾಲಿ ರಿಟ್ರೀವರ್ ಸಿಬ್ಬಂದಿ, ಅಶ್ರಫ್ ಮೊಯ್ದೀನ್ ಅವರಿಗೆ ಟರ್ಮಿನಲ್ ಕೆಳ ಮಹಡಿಯ ಭಾಗದಲ್ಲಿ ಈ ಬಳೆ ದೊರಕ್ಕಿದ್ದು, ಅದನ್ನು ಭದ್ರತಾ ತಂಡಕ್ಕೆ ಹಸ್ತಾಂತರಿಸಿದ್ದರು.
ಪ್ರಯಾಣಿಕರ ಕೋರಿಕೆಯಂತೆ ಕಾರ್ಯಪ್ರವೃತ್ತರಾಗಿದ್ದ ಟರ್ಮಿನಲ್ ಮ್ಯಾನೇಜರ್ ಗೆ ಅಶ್ರಫ್ ಭದ್ರತಾ ತಂಡಕ್ಕೆ ಹಸ್ತಾಂತರಿಸಿದ ಬಳೆಯು ಮಹಿಳೆಗೆ ಸೇರಿದ್ದು ಎಂದು ಖಚಿತಗೊಂಡಿತ್ತು.
ಅಶ್ರಫ್ ಅವರು ಭದ್ರತಾ ಸಿಬ್ಬಂದಿಗೆ ಸಿಕ್ಕ ಅಮೂಲ್ಯ ವಸ್ತುಗಳನ್ನು ಹಿಂದಿರುಗಿಸಿದ್ದು ಇದು ಎರಡನೇ ಬಾರಿ. ಅವರ ಪ್ರಾಮಾಣಿಕತೆ ಮತ್ತು ಪ್ರಾಮಾಣಿಕತೆ ಮೆಚ್ಚುಗೆಗೆ ಪಾತ್ರವಾಗಿದೆ. ಬಳೆ ಮರಳಿ ಪಡೆದ ಮಹಿಳೆಯ ಮುಖದಲ್ಲಿ ಕಂಡ ಸಂತಸ ತನ್ನಲ್ಲಿ ಸಾರ್ಥಕ ಭಾವ ಮೂಡಿಸಿತು ಎಂದು ಅಶ್ರಫ್ ಹೇಳಿದರು. ಮಹಿಳೆ ಪಅಶ್ರಫ್ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.