ಮಂಗಳೂರು, ಫೆ. 02 (DaijiworldNews/SM): ಉಡುಪಿ ಮಹಿಳಾ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಲೇಜಿನ ಹಿಜಾಬ್ ವಿಚಾರಕ್ಕೆ ಯಾರೂ ಕೂಡ ಮೂಗು ತುರಿಸಬಾರದು ಎಂದಿದ್ದಾರೆ.
ಕಾಲೇಜು ಆಡಳಿತ ಮಂಡಳಿ, ಹೆತ್ತವರು, ಸ್ಥಳೀಯರೇ ಇದನ್ನು ಬಗೆ ಹರಿಸಿಕೊಳ್ಳಬೇಕು. ಬಗೆ ಹರಿಯದಿದ್ದರೆ ಕೋರ್ಟ್ಗೆ ಹೋಗಲಿ, ಕೋರ್ಟ್ ತೀರ್ಮಾನಿಸುತ್ತದೆ. ಹಿಜಾಬ್ಗೆ ವಿರುದ್ಧವಾಗಿ ಶಾಲು ಹಾಕಿಕೊಂಡು ಹೋಗುವುದು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೂ ಕೂಡಾ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಾರದು. ಒಂದು ಕಡೆ ಧಾರ್ಮಿಕ ಸ್ವಾತಂತ್ರ್ಯ, ಇನ್ನೊಂದು ಕಡೆ ಸಮವಸ್ತ್ರದ ಚರ್ಚೆ ನಡೆಯುತ್ತಿದೆ. ನನ್ನ ಮಗಳಿಗೂ ಕೂಡಾ ಹಿಜಾಬ್ ಹಾಕದೆ ಇರಲು ಸಾಧ್ಯವಿರಲಿಲ್ಲ. ಹಾಗಾಗಿ ನಾನು ಹಿಜಾಬ್ ಧರಿಸಲು ಅವಕಾಶವಿದ್ದ ಕಾಲೇಜಿಗೆ ಆಕೆಯನ್ನು ಸೇರಿಸಿದೆ. ಹಿಜಾಬ್ ಧರಿಸಲು ಅವಕಾಶವಿದ್ದ ಕಾಲೇಜಿಗೆ ಮಗಳನ್ನು ಸೇರಿಸಿದ್ದೇನೆ.
ಅವಕಾಶ ಇಲ್ಲದ ಕಡೆ ಸೇರಿಸಿ ನಾನು ಹೋರಾಟಕ್ಕೆ ನಿಂತರೆ ಆಗುವುದೇ? ಹೆಣ್ಣು ಮಕ್ಕಳ ಶಿಕ್ಷಣವು ಬಹಳಷ್ಟು ಮುಖ್ಯವಾಗಿದೆ. ಆದರೆ ಈ ವಿಚಾರದಲ್ಲಿ ಮಕ್ಕಳ ಶಿಕ್ಷಣದ ಚಿಂತೆ ಯಾರಿಗೂ ಇಲ್ಲ. ಇಲ್ಲಿ ಕೇವಲ ರಾಜಕೀಯ ಮತ್ತು ಸ್ವಪ್ರತಿಷ್ಠೆಯಾಗಿಬಿಟ್ಟಿದೆ. ಮಕ್ಕಳ ಶಿಕ್ಷಣ ಮುಖ್ಯವಾದರೆ ಈ ವಿಚಾರ ಬಗೆಹರಿಯುತ್ತದೆ ಎಂದು ಮಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಯುಟಿ ಖಾದರ್ ಹೇಳಿಕೆ ನೀಡಿದ್ದಾರೆ.