ಮಂಗಳೂರು, ಫೆ 02(DaijiworldNews/KP): ಅಕ್ರಮವಾಗಿ ಗುರುತಿಸಿಕೊಂಡಿರುವ ಬಿಟ್ ಕಾಯಿನ್ ದಂಧೆಯನ್ನು ಸಕ್ರಮಗೊಳಿಸುವ ಅವಕಾಶವನ್ನು ನೀಡಿರುವ ಕೇಂದ್ರ ಸರ್ಕಾರ ಬಜೆಟ್ ಕಪ್ಪು ಹಣವನ್ನು ವೈಟ್ ಮಾಡುವ ಬಜೆಟ್ ಆಗಿದೆ ಎಂದು ವಿಧಾನ ಸಭೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಬಾರಿಯ ಬಜೆಟ್ ನ ಮೂಲಕ ರಾಜ್ಯಗಳು ಗುಲಾಮರನ್ನಾಗಿ ಮಾಡಿ ಸರ್ವಾಧಿಕಾರಿ ಧೋರಣೆಯನ್ನು ಕೇಂದ್ರ ಪ್ರದರ್ಶಿಸುತ್ತಿದೆ. ಅಲ್ಲದೆ ಬಜೆಟ್ ಜನಸಾಮಾನ್ಯರನ್ನು ಮರೆಯಲಾಗಿದ್ದು, ಆದರೆ ಡಿಜಿಟಲ್ ಕರೆನ್ಸಿ ವರ್ಚುವಲ್ ಕರೆನ್ಸಿ ಬಗ್ಗೆ ಪ್ರಸ್ತಾಪಿಸಿ ಶೇ.30ರಷ್ಟು ಪಾವತಿ ಮಾಡಿದರೆ ಬಿಟ್ ಕಾಯಿನ್ ವ್ಯವಹಾರವನ್ನೂ ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಇನ್ನು ಮೇಕೆದಾಟು ಯೋಜನೆಗೆ ಸಂಬಂಧಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡಿದಾಗ ಬಿಜೆಪಿ ವಿರೋಧಿಸಿತ್ತು, ಅದನ್ನು ಕೇಂದ್ರ ಸರಕಾರ ದ ಮೂಲಕ ಬಗೆಹರಿಸಲಾಗುವುದು ಎಂದು ಹೇಳಿತ್ತು, ಆದರೆ ಕಳಸಾಬಂಡೂರಿ, ಮಹಾದಾಯಿ ಯೋಜನೆ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವೇ ಮಾಡಿಲ್ಲ. ಅದು ಕೇಂದ್ರದ ಯೋಜನೆ ಎಂದಿತ್ತು ಆದರೆ ಈ ಬಾರಿ ಬಜೆಟ್ನಲ್ಲಿ ಯಾಕೆ ಪ್ರಸ್ತಾಪ ಮಾಡಿಲ್ಲ, ಅಲ್ಲದೆ ರಾಜ್ಯಗಳಿಗೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಪ್ರತ್ಯೇಕ ಅನುದಾನ, ಹೊಸ ರೈಲುಗಳ ಘೋಷಣೆಯ ಮೂಲಕ ಒದಗಿಸಲಾಗುತ್ತಿತ್ತು, ಆದರೆ ಈ ಬಾರಿ ಅದು ಯಾವುದು ಇಲ್ಲ. ಯುವಕರಿಗೆ ವಾರ್ಷಿಕ ಉದ್ಯೋಗ 2 ಕೋಟಿಯಿಂದ 80 ಲಕ್ಷಕ್ಕೆ ಇಳಿದಿದೆ ಇದರಿಂದಾಗಿ ಸರ್ಕಾರದ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಂಡಿದ್ದಾರೆ ಎಂದರು.
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿಯನ್ನು ಪ್ರಾರ್ಥನಾ ಮಂದಿರವನ್ನಾಗಿ ಪರಿವರ್ತನೆ ಮಾಡಿದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಈ ವಿಷಯವನ್ನು ಖಂಡಿಸುತ್ತೇನೆ, ತಂಗುದಾಣವನ್ನು ಪ್ರಾರ್ಥನಾ ಕೊಠಡಿಯನ್ನಾಗಿ ಪರಿವರ್ತಿಸಿರುವ ಬಗ್ಗೆ ರೈಲ್ವೆ ಇಲಾಖೆ ಮುಂದೆ ಬಂದು ಸ್ಪಷ್ಟನೆ ನೀಡಬೇಕು ಹಾಗೂ ಸರ್ಕಾರ ತನಿಖೆ ನಡೆಸಿ ಸತ್ಯಾಂಶ ತಿಳಿಸಿಬೇಕು ಎಂದರು.
ಬಲ್ಲಾಳ್ಬಾಗ್ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಖಾದರ್, ಇಂತಹ ಘಟನೆಗಳು ನಡೆದಾಗ ಪೋಷಕರು ತಮ್ಮ ಮಕ್ಕಳನ್ನು ಮಂಗಳೂರಿನ ಕಾಲೇಜುಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ, ಇದು ಮಂಗಳೂರಿಗೆ ದೊಡ್ಡ ನಷ್ಟವಾಗುತ್ತದೆ ಎಂದರು.
ಇನ್ನು ಹಿಜಾಬ್ ವಿವಾದದ ಬಗ್ಗೆ ಉತ್ತರಿಸಿದ ಅವರು, ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರೊಂದಿಗೆ ಇದನ್ನು ಪರಿಹರಿಸಬೇಕು, ಏಕೆಂದರೆ ಇದು ರಾಜಕೀಯ ದೃಷ್ಟಿಕೋನವನ್ನು ತೆಗೆದುಕೊಂಡಾಗ ಹೆಚ್ಚಿನ ಸಮಸ್ಯೆ ಎದುರಾಗುತ್ತದೆ. ಸದ್ಯ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ, ಆದ್ದರಿಂದ ನ್ಯಾಯಾಲಯವೇ ಒಂದು ತೀರ್ಮಾನ ನೀಡಲಿ. ಈ ಸಮಸ್ಯೆಯಿಂದ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಬಾರದು ಎಂದರು.