ಸುಳ್ಯ, ಫೆ 02(DaijiworldNews/MS): ನದಿಯಲ್ಲಿ ಮುಳುಗಿ ಆರು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಪೈಚಾರು ದೊಡ್ಡೇರಿ ಬಳಿ ಫೆ. 2 ರ ಬುಧವಾರ ನಡೆದಿದೆ. ಮೃತ ಬಾಲಕನನ್ನು ಆಂದ್ರಪ್ರದೇಶ ಮೂಲದ ಕುಪ್ಪರಾ(6) ಎಂದು ಗುರುತಿಸಲಾಗಿದೆ.
ಆಂಧ್ರ ಮೂಲದ ಕುಟುಂಬಸ್ಥರು ಪೈಚಾರು ಬಳಿ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದು ಅಲ್ಲೇ ಪರಿಸರದಲ್ಲಿ ಟೆಂಟ್ ನಿರ್ಮಿಸಿ ವಾಸವಾಗಿದ್ದರು. ಬುಧವಾರ ಕುಟುಂಬಸ್ಥರ ಜೊತೆ ನದಿಗೆ ಸ್ನಾನಕ್ಕೆಂದು ಇಳಿದಾಗ ಬಾಲಕ ನಾಪತ್ತೆಯಾಗಿದ್ದಾನೆ. ಗಾಬರಿಗೊಂಡ ಆತನ ಪೋಷಕರು ನೀರಿನಲ್ಲಿ ಮುಳುಗಿರುವ ಅನುಮಾನದಿಂದ ಹುಡುಕಾಡಿದಾಗ ಅಲ್ಲೇ ಪಕ್ಕದಲ್ಲಿ ಆತನ ಮೃತದೇಹ ಲಭಿಸಿದೆ.
ನದಿ ಬದಿಯಲ್ಲಿ ಕಿರುಚಾಟ ಕೇಳಿದ ಸ್ಥಳೀಯರು ಹೋಗಿ ವಿಚಾರಿಸಿದಾಗ ನಡೆದ ಘಟನೆ ತಿಳಿದು ಬಂದಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.