ಕುಂದಾಪುರ,ಫೆ 02(DaijiworldNews/MS): ಕಳೆದ ಕೆಲವು ದಿನಗಳಿಂದ ಉಡುಪಿಯಲ್ಲಿನ ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ವಿವಾದ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಕುಂದಾಪುರದ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ ಭುಗಿಲೆದ್ದಿದ್ದು ಬುಧವಾರ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಪೋಷಕರ ಸಭೆ ವಿಫಲವಾಗಿದೆ.
ಸ್ಕಾರ್ಫ್ Vs ಕೇಸರಿ ಶಾಲು..!
ಕುಂದಾಪುರದ ಜ್ಯೂನಿಯರ್ ಕಾಲೇಜು (ಸರಕಾರಿ ಪದವಿ ಪೂರ್ವ ಕಾಲೇಜು) ಈ ಭಾಗದಲ್ಲಿ ಹಲವು ವರ್ಷಗಳಿಂದ ಉತ್ತಮ ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾಗಿದೆ. ಕಾಲೇಜಿಗೆ ಒಂದಷ್ಟು ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಬರುತ್ತಿರುವುದನ್ನು ವಿರೋಧಿಸಿ ಮತ್ತೊಂದಷ್ಟು ವಿದ್ಯಾರ್ಥಿಗಳು ಬುಧವಾರ ಕೇಸರಿ ಶಾಲು ಧರಿಸಿ ಆಗಮಿಸಿದ್ದರು. ಸುಮಾರು 28 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸುತ್ತಿದ್ದು ಇಂದು 100ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಪರಿಸ್ಥಿತಿ ವಿಕೋಪಕ್ಕೆ ಬರುವ ಲಕ್ಷಣಗಳು ಕಾಣುತ್ತಲೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ಖುದ್ದು ಕಾಲೇಜಿಗೆ ಭೇಟಿ ನೀಡಿದ್ದರು.
ತಾರ್ಕಿಕ ಅಂತ್ಯ ಕಾಣದ ಸಭೆ
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹಿಜಾಬ್ ಕುರಿತಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರ ಜತೆ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದು, ಸಂಧಾನ ವಿಫಲವಾಗಿದೆ. ಹಿಜಾಬ್ ಧರಿಸುವುದು ನಮ್ಮ ಪದ್ಧತಿ ಎಂದು ಪೋಷಕರು ಪಟ್ಟು ಹಿಡಿದರು.
ವಸ್ತ್ರಸಂಹಿತೆ ಹೊರತಾಗಿ ಬೇರೆ ಬಟ್ಟೆಗಳಿಗೆ ಅವಕಾಶ ಇಲ್ಲ ಎಂದು ಸಚಿವರು ಸೂಚನೆ ನೀಡಿದ್ದು, ಸಮವಸ್ತ್ರದ ಹೊರತಾಗಿ ಇತರ ವಸ್ತ್ರ ಧರಿಸಿದರೆ ಕಾಲೇಜು ಆವರಣದೊಳಗೆ ಪ್ರವೇಶ ಇಲ್ಲ. ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನಾಳೆಯಿಂದ ಎರಡೂ ಸಮುದಾಯದ ವಿದ್ಯಾರ್ಥಿಗಳು ವಸ್ತ್ರ ಸಂಹಿತೆ ಪಾಲನೆ ಮಾಡಬೇಕು ಎಂದು ಕಾಲೇಜು ವ್ಯವಸ್ಥೆ ತಿಳಿಸಿದೆ.