ಕಾರ್ಕಳ, ಫೆ 02(DaijiworldNews/MS): ಮುಡಾರು ಹೆಪೆಜಾರುನಲ್ಲಿ ಕರ್ತವ್ಯನಿರತ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಹಗೂ ಸಿಬ್ಬಂದಿಗಳ ಮೇಲೆ ಕಾರು ಹರಿಹಾಯಿಸಿ ಕೊಲೆಗೆ ಪ್ರಯತ್ನಿಸಿ ಘಟನೆಗೆ ತನಿಖೆಯ ಹೊಣೆಗಾರಿಕೆ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಅವರಿಗೆ ವಹಿಸಲಾಗಿದೆ.
ಜನವರಿ 29ರ ರಾತ್ರಿ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ಠಾಣಾ ಕಾನ್ಸ್ಟೇಬಲ್ ರಂಜಿತ್ ಕುಮಾರ್ ರವರೊಂದಿಗೆ ಇಲಾಖಾ ಜೀಪು ನಂಬ್ರ ಕೆಎ20 ಜಿ 162 ಇದರ ಚಾಲಕ ಸತೀಶ್ ನಾಯ್ಕ ಇವರೊಂದಿಗೆ ಕರ್ತವ್ಯದಲ್ಲಿ ನಿರತರಾಗಿದ್ದಾಗ ಈ ಘಟನೆ ನಡೆದಿತ್ತು. ಘಟನೆಯಲ್ಲಿ ನಡುವೆಯೂ ಕರ್ತವ್ಯ ನಿಷ್ಠೆ ತೋರಿಸಿದ ಪೊಲೀಸರು ಆರೋಪಿಗಳ ವಾಹನಗಳನ್ನು ಬೆನ್ನಟ್ಟಿದ್ದು, ಮೂಡುಬಿದಿರೆ ತಾಲೂಕಿನ ಮಿಜಾರು ಹಂಡೇಲಿನ ನಿವಾಸಿ ಸೆಯ್ಯದ್ ಜುಹಾದ್(31) ಬಂಧಿಸಲಾಗಿತ್ತು. ಕಳವುಗೈದು ಸಾಗಾಟ ಮಾಡುತ್ತಿದ್ದ ಮಾರುತಿ ರಿಡ್ಜ್ ಕಾರೊಂದರಲ್ಲಿ ಆರೋಪಿತರಿದ್ದು ಅವರೆಲ್ಲರೂ ವಾಹನ ಸಮೇತ ತಪ್ಪಿಸಿಕೊಂಡಿದ್ದರು.
ಮತ್ತೊಬ್ಬನ ಬಂಧನ
ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಹುಕ್ರಟ್ಟೆಯ ಸುರೇಶ(45) ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕೂಲಿ ಕೆಲಸ ಮಾಡುತ್ತಿದ್ದರೂ, ಉಳಿದ ಬಹುತೇಕ ಸಮಯದಲ್ಲಿ ಬೈಕ್ನಲ್ಲಿ ತಿರುಗುತ್ತಿರುವುದು ಹಾಗೂ ಮೊಬೈಲ್ ಸಂಭಾಷಣೆ ನಡೆಸುತ್ತಾ ತನ್ನ ಕುಕೃತ್ಯ ನಡೆಸುತ್ತಿದ್ದನು. ಬಡತನದಲ್ಲಿ ಬೆಳೆದವನಾದರೂ, ದಿನಚರಿಯ ಕುರಿತು ಗಮನಿಸದರೆ ಐಶಾರಾಮಿ ಜೀವನ ಸಾಗಿಸುತ್ತಿದ್ದನೆಂದು ಆತನ ಬಗ್ಗೆ ತಿಳಿದವರು ವಿವರಿಸುತ್ತಾರೆ.ನಲ್ಲೂರು, ಬಜಗೋಳಿ. ಮಾಳ ಕಡೆ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳ ಕುರಿತು ಸೈಯದ್ ಜುಹಾದ್ಗೆ ಸುರೇಶ ಮಾಹಿತಿ ನೀಡುತ್ತಿದ್ದನು. ಕಳ್ಳ ಸಾಗಾಟ ವಾಹನದ ಬೆಂಗಾವಲಾಗಿ ಸೈಯದ್ ಜುಹಾದ್ ಬೈಕ್ನಲ್ಲಿ ಹೋಗುತ್ತಿದ್ದನು. ಅಂತಹದೇ ಕಾರ್ಯ ನಡೆಸಲು ಮುಂದಾಗಿ ಘಟನೆಯ ದಿನದಂದು ಬೈಕ್ ಸ್ಕಿಡ್ ಆಗಿ ಬಿದ್ದು ಪೊಲೀಸರ ಬಂಧನಕ್ಕೆ ಒಳಗಾಗಿದ್ದನು.ಘಟನೆಯ ದಿನದಂದು ಆರೋಪಿಗಳು ಹುಕ್ರಟ್ಟೆಯ ಕಡೆ ಕಾರು ಚಲಾಯಿಸಿಕೊಂಡು ಹೋಗಿದ್ದು, ಆರೋಪಿಗಳ ನೆರವಿಗೆ ಸುರೇಶ ನೆರವು ನೀಡಿರುವ ಕುರಿತು ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.ಫಿರೋಜ್, ಮೈಯದ್ದಿ ಇತರ ಇಬ್ಬರು ಆರೋಪಿತರಾಗಿದ್ದು, ಅವರು ಮೂಡಬಿದಿರೆಯ ಹಂಡೇಲು ನಿವಾಸಿಗಳಾಗಿದ್ದಾರೆ. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದರು. ಅವರ ಇರುವಿಕೆಯ ಕುರಿತು ಪೊಲೀಸರ ವಿಶೇಷ ತಂಡ ಕಲೆ ಹಾಕುತ್ತಿದೆ.
ಒಂದು ವರ್ಷದಲ್ಲಿ 15 ಪ್ರಕರಣ: 13 ಪ್ರಕರಣದ ಆರೋಪಿಗಳು ಪತ್ತೆ
ಕಾರ್ಕಳ ಡಿವೈಎಸ್ಪಿ ಕಾರ್ಯಕ್ಷೇತ್ರದಲ್ಲಿ2021 ಜನವರಿಯಿಂದ ಡಿಸೆಂಬರ್ ತನಕ ಗೋ ಕಳವಿಗೆ ಸಂಬಂಧಿಸಿದಂತೆ ಒಟ್ಟಾರೆ 15 ಪ್ರಕರಣ ದಾಖಲಾಗಿದೆ. ಅದರಲ್ಲಿ ಈಗಾಗಲೇ 13 ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಾನೂನಿನಂತೆ ಕ್ರಮ ಕೈಗೊಂಡಿದ್ದಾರೆ. ಮಿಯ್ಯಾರು, ನಿಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಎಲ್ಲಾ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿರುವುದು ನಾಗರಿಕರ ಶ್ಲಾಘನೆಗೆ ಕಾರಣರಾಗಿದ್ದಾರೆ.