ಪಡುಬಿದ್ರಿ, ಫೆ 01 (DaijiworldNews/KP): ಪಡುಬಿದ್ರಿ ತಾಲೂಕಿನ ನಡ್ಸಾಲು ಗ್ರಾಮದ ವ್ಯಕ್ತಿಯೋರ್ವನನ್ನು ದರೋಡೆಗೈದು ಅಪಹರಿಸಲು ಪ್ರಯತ್ನಿಸಿದ ಘಟನೆ ಕಂಚಿನಡ್ಕ ರುದ್ರಭೂಮಿ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ
ಸಾಂದರ್ಭಿಕ ಚಿತ್ರ
ಅನ್ಸಾರ್ ಮಂಜಿಲ್ನಿ ನಿವಾಸಿ ಮನ್ಸೂರ್ ಕೆ (30) ಎಂದಿನಂತೆ ಪಡುಬಿದ್ರಿಯಲ್ಲಿರುವ ತನ್ನ ಎಂ.ಎಸ್.ಫ್ರೂಟ್ಸ್ ಅಂಡ್ ವೆಜಿಟೆಬಲ್ಸ್ ಮತ್ತು ಎಂ.ಎಸ್. ಗೂಡ್ಸ್ ಟ್ರಾನ್ಸ್ಪೋರ್ಟ್ ಅಂಗಡಿಯ ವಹಿವಾಟು ಮುಗಿಸಿ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಎರಡು ಕಾರು ಮತ್ತು ಎರಡು ರಿಕ್ಷಾದಲ್ಲಿ ಬಂದ ಆರೋಪಿಗಳು ಅವರ ವಾಹನವನ್ನು ಅಡ್ಡಗಟ್ಟಿ ಸುತ್ತುವರಿದು ದರೋಡೆಗೈದು, ಹತ್ಯೆಮಾಡಲು ಪ್ರಯತ್ನಿಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲವಾರು, ಚಾಕು, ಕಬ್ಬಣದ ರಾಡ್, ದೊಣ್ಣೆ ಹೊಂದಿದ್ದ 8 ಮಂದಿ ದರೋಡೆಕೋರರ ಗುಂಪು ಕಂಚಿನಡ್ಕ ರುದ್ರಭೂಮಿಗೆ ಹೋಗುವ ರಸ್ತೆಯಲ್ಲಿ ಮನ್ಸೂರ್ ಅವರನ್ನು ಅಡ್ಡ ಹಾಕಿ ಹಣೆಗೆ ಪಿಸ್ತೂಲ್ ಗುರಿಯಾಗಿಸಿ ಹಣ ನೀಡುವಂತೆ ಬೆದರಿಸಿ ಮನ್ಸೂರ್ ಬಳಿ ಇದ್ದ 8 ಗ್ರಾಂ ನ ಒಂದು ಉಂಗುರ ಹಾಗೂ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೂರು ಲಕ್ಷ ರೂಪಾಯಿಯನ್ನು ದರೋಡೆ ಮಾಡಿ ನಂತರ ಕಾಲು, ತಲೆ, ಎದೆಯ ಭಾಗಕ್ಕೆ ಹಲ್ಲೆ ಮಾಡಿದ್ದಾರೆ.
ಇನ್ನು ತಲೆ ಮತ್ತು ಕಾಲಿಗೆ ತೀವ್ರವಾದ ಗಾಯಗೊಂಡಿದ್ದ ಮನ್ಸೂರ್ ದರೋಡೆಕೋರರ ಬಳಿಯಿಂದ ತಪ್ಪಿಸಿಕೊಂಡು ಬಂದು ನಗರದ ಯತೀಶ್ಎನ್ನುವರ ನೇರವಿನಿಂದ ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ.
ಆರೋಪಿಗಳನ್ನು ಕಂಚಿನಡ್ಕ ನಿವಾಸಿಗಳಾದ ಹಸನ್ ಬಾವಾ, ಫಿರೋಝ್, ರೆಹಮಾನ್, ನಝೀರ್, ರಹೀಮ್, ಯೂಸುಫ್, ಕಾಟ್ಟಿಪಳ್ಳದ ಅಜೀದ್ ಸಹಿತ ಎಂಟು ಮಂದಿ ದರೋಡೆ ಮಾಡಿ ಅಪಹಾರಿಸಲು ಪಯತ್ನಿಸಿದ ಆರೋಪಿಗಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.