ಉಡುಪಿ: ಫೆ 01 (DaijiworldNews/HR): ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಅನೇಕ ಚರ್ಚೆಗಳು ನಡೆಯುತ್ತಿದ್ದು, ಧಾರ್ಮಿಕ, ಸಾಂವಿಧಾನಿಕ ಹಕ್ಕಾದ ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎಂದು ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿದ್ಯಾರ್ಥಿನಿ ಆಲಿಯಾ, "ಧಾರ್ಮಿಕ, ಸಾಂವಿಧಾನಿಕ ಹಕ್ಕಾದ ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತೇವೆ. ಅದು ನಾವು ತೆರಿಗೆ ಪಾವತಿಸುವ ಸರ್ಕಾರಿ ಕಾಲೇಜು. ಯಾರು ಕೂಡ ಹಸ್ತಕ್ಷೇಪ ಮಾಡುವ ಅವಶ್ಯಕತೆಯಿಲ್ಲ. ಬೆದರಿಕೆಗಳಿಂದ ನಮ್ಮ ನ್ಯಾಯಪರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದಿದ್ದಾರೆ.
ಮತ್ತೊರ್ವ ವಿದ್ಯಾರ್ಥಿ ಮಸೂದ್ ಟ್ವೀಟ್ ಮಾಡಿ, ಹಿಜಾಬ್ ಧರಿಸುವುದಕ್ಕೆ ಹಿಂದಿನಿಂದಲೂ ಯಾರೂ ನಿರ್ಬಂಧಿಸುವುದಿಲ್ಲ, ಹಿಜಾಬ್ ವಿರುದ್ಧ ತಿರುಗುವ ಯಾವುದೇ ಪಿತೂರಿಗಳು ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಕರ್ನಾಟಕ ಸರ್ಕಾರದ ಆದೇಶವನ್ನು ಧಿಕ್ಕರಿಸಿ ‘ಹಿಜಾಬ್’ ಧರಿಸಿ ತರಗತಿಗೆ ಹಾಜರಾದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರನ್ನು ಮಂಗಳವಾರ ಆಯಾ ತರಗತಿಯಿಂದ ಹೊರಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾಲೇಜಿನ ಆವರಣದಲ್ಲಿ ಮಾಧ್ಯಮದವರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ಯಾಂಪಸ್ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.