ಮಂಗಳೂರು, ಫೆ 01(DaijiworldNews/MS): ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಹಾಗೂ ಇತರೆ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಮಂಗಳವಾರ ಹಂಪನಕಟ್ಟೆ ಜಂಕ್ಷನ್, ಎಮ್ಮೆಕೆರೆ ಈಜುಕೊಳ, ವೆನ್ ಲಾಕ್ ಆಸ್ಪತ್ರೆಯ ಸರ್ಜಿಕಲ್ ವಿಭಾಗ ,ಮಂಗಳಾದೇವಿ ಉಜ್ಜರ ಕರೆ,ಕಂಕನಾಡಿ ಮಾರುಕಟ್ಟೆ ಸಂಕೀರ್ಣ, ನಂದಿಗುಡ್ಡ,ಕದ್ರಿ ಪಾರ್ಕ್,ಮಂಗಳ ಕ್ರೀಡಾಂಗಣದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಅವರು ಪತ್ರಿಕಾಗೋಷ್ಟಿ ನಡೆಸಿ ಕಾಮಗಾರಿಗಳ ಕುರಿತಂತೆ ವಿವರ ನೀಡಿದರು. ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರವು ಮೇ ತಿಂಗಳ ಗಡುವು ನೀಡಿದ್ದರೂ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಶೀಘ್ರ ಮುಗಿಸಲು ನಾವು ಒತ್ತು ನೀಡಿದ್ದೇವೆ. ಮಾರ್ಚ್ ಅಂತ್ಯದ ಗಡುವು ನೀಡಲಾಗಿದೆ. ಮಂಗಳೂರು ನಗರದ ಇನ್ನಷ್ಟು ಅಭಿವೃದ್ಧಿಗೆ ಇನ್ನೂ ನೂರು ಕೋಟಿ ಅನುದಾನದ ಬೇಕಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕಳಪೆ ಕಾಮಗಾರಿಯ ದೂರುಗಳು ಕೇಳಿ ಬಂದಲ್ಲಿ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಳ ರಾವ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತುಇತರೆ ಅಧಿಕಾರಿಗಳು ಜೊತೆಗಿದ್ದರು.