ಬೈಂದೂರು, ಜ. 27 (DaijiworldNews/SM): ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ಹೆರಂಜಾಲಿನ ಶಾಲೆಯೊಂದರ 100 ವಿದ್ಯಾರ್ಥಿಗಳಿಗೆ ಕೊವಿಡ್ 19 ಪಾಸಿಟಿವ್ ದೃಢಪಟ್ಟಿದೆ.
ಈ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಇದ್ದು 236 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಪೈಕಿ ನೂರು ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜನವರಿ 25ರಂದು ಕಿರಮುಂಜೇಶ್ವರ ಆರೊಗ್ಯ ಕೇಂದ್ರದಿಂದ ಎಲ್ಲಾ ಮಕ್ಕಳ ಸ್ವಾಬ್ ಸಂಗ್ರಹಿಸಿ ಪರೀಕ್ಷೆ ನಡೆಸಿ ಜನವರಿ 27ರಂದು ವರದಿ ಬಂದಿದ್ದು 100 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ದೃಡಪಟ್ಟಿರುವುದಾಗಿ ತಿಳಿದು ಬಂದಿದೆ.
ಶಾಲೆಯಲ್ಲಿ ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಬೇರೆ ಬೇರೆ ಎರಡು ಮಹಡಿಯ ವಸತಿ ನಿಲಯವಿದ್ದು ಪಾಸಿಟಿವ್ ಬಂದ ವಿದ್ಯಾರ್ಥಿಗಳನ್ನು ಮೇಲಿನ ಮಹಡಿಯಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ನೆಗೆಟಿವ್ ಬಂದ ವಿದ್ಯಾರ್ಥಿಗಳಿಗೆ ನೆಲ ಮಹಡಿಯಲ್ಲಿ ಉಳಿದುಕೊಳ್ಳುವ ವ್ಯವಸ್ಯೆ ಮಾಡಲಾಗಿದೆ.
ಮೇಲಿನ ಮಹಡಿಯವರು ಕೆಳ ಮಹಡಿಗೆ ವಿದ್ಯಾರ್ಥಿಗಳು ಬರದಂತೆ ಬಂದೋಬಸ್ತ್ ಮಾಡಲಾಗಿದೆ.