ಮಂಗಳೂರು, ಡಿ08(SS): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ 6 ಹೊಸ ಮಾರ್ಗಗಳಲ್ಲಿ ವಿಮಾನ ಹಾರಾಟ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ.
ಮಂಗಳೂರು ಏರ್ಪೋರ್ಟ್ನಿಂದ ಹೆಚ್ಚುವರಿಯಾಗಿ ಆರು ಮಾರ್ಗಗಳಲ್ಲಿ ಹಾರಾಟ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಇಂಡಿಗೋ ಏರ್ಲೈನ್ಸ್ನ 2 ಹೊಸ ಮಾರ್ಗಗಳ ಸೇವೆ ಜತೆಗೆ ಏರ್ ಇಂಡಿಯಾ ಏರ್ಲೈನ್ಸ್ ಮಂಗಳೂರು-ದಿಲ್ಲಿ, ಮಂಗಳೂರು-ಪುಣೆ, ಮಂಗಳೂರು-ಗೋವಾ ಹಾಗೂ ಮಂಗಳೂರು-ಬೆಂಗಳೂರು ಮಧ್ಯೆ ವಿಮಾನಯಾನಕ್ಕೆ ಈಗಾಗಲೇ ಮಾತುಕತೆ ನಡೆಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಹಾಗೂ ಅಬುಧಾಬಿಗೆ ಸಂಚಾರ ನಡೆಸುತ್ತಿದ್ದ ಜೆಟ್ ಏರ್ಲೈನ್ಸ್ನ ಎರಡು ವಿಮಾನಗಳ ಹಾರಾಟವು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಡಿ.4ರಿಂದ ರದ್ದುಗೊಂಡಿದೆ. ಆದರೆ ಈ ನಡುವೆ ಇಂಡಿಗೋ ಏರ್ಲೈನ್ಸ್ ಮಂಗಳೂರಿನಿಂದ 2 ಹೊಸ ಮಾರ್ಗಗಳಲ್ಲಿ ಹಾರಾಟ ಪ್ರಾರಂಭಿಸಲು ಸಿದ್ಧವಾಗಿದೆ. ಇಂಡಿಗೋ ಮಂಗಳೂರು- ತಿರುವನಂತಪುರ ಹಾಗೂ ಮಂಗಳೂರು-ಕೊಚ್ಚಿ ಮಾರ್ಗ ದಲ್ಲಿ ಡಿ. 10ರ ನಂತರ ಹಾರಾಟ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಂಸದ ನಳಿನ್ ಈಗಾಗಲೇ ವಿಮಾನಯಾನ ಸಚಿವರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ.