ಹೊಸದಿಲ್ಲಿ, ಡಿ08(SS): ಒಂದು ವೇಳೆ ಕೇಂದ್ರ ಅಥವಾ ಉತ್ತರ ಪ್ರದೇಶ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದಲ್ಲಿ ಸರಕಾರವನ್ನು ಉರುಳಿಸುವುದಾಗಿ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಎಚ್ಚರಿಸಿದ್ದಾರೆ.
ರಾಮ ಮಂದಿರದ ವಿಚಾರ ಜನವರಿಯಲ್ಲಿ ವಿಚಾರಣೆಗೆ ಬರಲಿದೆ. ನನಗೆ ವೈಯಕ್ತಿಕವಾಗಿ ತಿಳಿದಿರುವ ಪ್ರಕಾರ ಮುಸ್ಲಿಮರು ತಮಗೆ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ. ಸಂವಿಧಾನ ಕೊಡ ಮಾಡಿದ ಹಕ್ಕಿನ ಅನ್ವಯ ನನಗೆ ಪ್ರಾರ್ಥಿಸುವ ಅಧಿಕಾರವಿದೆ. ನನ್ನ ನಂಬಿಕೆಯ ಪ್ರಕಾರ ರಾಮ ಇಲ್ಲಿಯೇ ಹುಟ್ಟಿದ್ದು. ನನಗೆ ಇಲ್ಲಿ ದೊಡ್ಡ ದೇವಳ ಬೇಕು. ಮುಸ್ಲಿಮರು ಕೇವಲ ಆಸ್ತಿಗಾಗಿ ಕೇಳುತ್ತಾರೆ. ಅದು ಮೂಲಭೂತ ಹಕ್ಕಲ್ಲ. ನನ್ನ ಮೂಲಭೂತ ಹಕ್ಕು ಜಮೀನಿನ ಮೇಲಿನ ಅವರ ಹಕ್ಕಿಗಿಂತ ಮಿಗಿಲು ಎಂದು ಪರಿಗಣಿಸಿ ನನ್ನ ಅಪೀಲನ್ನು ಸ್ವೀಕರಿಸಬೇಕು ಎಂದು ಹೇಳಿದ್ದಾರೆ.
ಬಾಬರ್ ಆಕ್ರಮಿಸಿದ ಜಮೀನು ತಮ್ಮದು ಎಂದು ಸುನ್ನಿ ವಕ್ಫ್ ಮಂಡಳಿ ಪ್ರಕರಣ ದಾಖಲಿಸಿತ್ತು. ಅವರು ತಮಗೆ ಬಾಬರಿ ಮಸೀದಿ ಮರುನಿರ್ಮಾಣ ಮಾಡಲಿಕ್ಕಿದೆ ಎಂದು ಹೇಳಿಲ್ಲ. ಆ ಜಮೀನಿನ ಮೇಲಿನ ಹಕ್ಕು ತಮ್ಮದು ಎಂದಷ್ಟೇ ಅವರು ಹೇಳಿದ್ದರು ಎಂದು ತಿಳಿಸಿದರು.