ಮಂಡ್ಯ, ಡಿ08(SS): ರೈತರ ಸಾಲಮನ್ನಾ ಪ್ರಕ್ರಿಯೆಗೆ ಇಂದಿನಿಂದಲೇ ಚಾಲನೆ ನೀಡಲಾಗುವುದು. ಒಂದು ವೇಳೆ ನನಗೆ ಸಾಲ ಮನ್ನಾ ಮಾಡಲಾಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ಸಾಲ ಮನ್ನಾಗೆ ದೊಡ್ಡಬಳ್ಳಾಪುರ ಮತ್ತು ಸೇಡಂನಿಂದ ಚಾಲನೆ ನೀಡಲಾಗುವುದು. ಸಾಲಮನ್ನಾ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಒಟ್ಟು 44 ಲಕ್ಷ ಕುಟುಂಬಗಳಿಗೆ ಋಣಮುಕ್ತ ಪ್ರಮಾಣ ಪತ್ರ ನೀಡಲು ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು.
ಇಸ್ರೇಲ್ನಲ್ಲಿ ರೈತರು ಒಟ್ಟಾಗಿ ವ್ಯವಸಾಯ ಮಾಡುತ್ತಾರೆ. ಅದೇ ರೀತಿ ಇಲ್ಲಿಯೂ ರೈತರು ಒಗ್ಗೂಡಿ ಕೃಷಿ ಮಾಡಲು ತೀರ್ಮಾನ ಮಾಡಿದರೆ ಹೊರಗಿನಿಂದ ಸಾಲ ಪಡೆಯುವ ಅವಶ್ಯಕತೆ ಇಲ್ಲ. ಸರ್ಕಾರವೇ ಆರ್ಥಿಕ ನೆರವು ನೀಡಲಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಗೋದಾಮು, ಮಾರುಕಟ್ಟೆ, ಬೆಳೆಗಳ ಸಂರಕ್ಷಣೆಗೆ ಶೀತಲೀಕರಣ ಘಟಕ ಸ್ಥಾಪನೆ ಮಾಡುವುದು ನನ್ನ ಕನಸಾಗಿದೆ. ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ಇನ್ನೂ ಬಿಜೆಪಿ ನಾಯಕರು ರೈತರಲ್ಲಿ ಅಪನಂಬಿಕೆ ಮೂಡಿಸುತ್ತಿದ್ದಾರೆ. ಒಂದು ವೇಳೆ ನನಗೆ ಸಾಲ ಮನ್ನಾ ಮಾಡಲಾಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.