ಬ್ರಹ್ಮಾವರ, ಜ 25 (DaijiworldNews/KP): ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದ ಬನ್ನಾಡಿ ಗ್ರಾಮದ ಸಂಜೀವ ಶೆಟ್ಟಿ ಎಂಬುವವರ ಕೃಷಿಭೂಮಿಯಲ್ಲಿ ಅಳುಪ ವಂಶದ ಒಂದನೇ ಕುಲಶೇಖರನ ಕಾಲಕ್ಕೆ ಸೇರಿದ ಅಪ್ರಕಟಿತ ಶಿಲಾ ಶಾಸನವೊಂದು ಪತ್ತೆಯಾಗಿದೆ.
12ನೇ ಶತಮಾನಕ್ಕೆ ಸೇರಿದ ಶಾಸನವನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿದ್ದು, ಶಾಸನದಲ್ಲಿ ಕನ್ನಡ ಲಿಪಿಯಲ್ಲಿ 18 ಸಾಲುಗಳು ಕಾಣಸಿಗುತ್ತದೆ, ಈ ಶಾಸನವನ್ನು ಬಿ ಕುಶಾ ಆಚಾರ್ಯ ಅವರು ಕೃಷಿಭೂಮಿಯಿಂದ ಹೊರತೆಗೆದಿದ್ದು, ಶಾಸನದಲ್ಲಿ ಬರೆದಿರುವ ವಿಷಯವನ್ನು ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರದ ಸಂಶೋಧನಾ ವಿದ್ವಾಂಸರಾದ ಶ್ರುತೇಶ್ ಆಚಾರ್ಯ ಅವರು ಅರ್ಥೈಸಿಕೊಂಡಿದ್ದಾರೆ.
ಶಾಸನವು ಸುಮಾರು ಐದು ಅಡಿ ಎತ್ತರ ಮತ್ತು ಎರಡು ಅಡಿ ಅಗಲವಿದ್ದು. ಶಾಸನದ ಮೇಲೆ, ಶಿವಲಿಂಗ ಹಾಗೂ ಎರಡು ಹಸುಗಳ ಜೊತೆಗೆ ಎರಡು ಬದಿಗಳಲ್ಲಿ ಇಬ್ಬರು ಪುರುಷರ ನಮಸ್ಕರಿಸುವ ಭಂಗಿಯಲ್ಲಿ ರೇಖಾಚಿತ್ರಗಳನ್ನು ಕಾಣಬಹುದಾಗಿದೆ.
ಶಾಸನದ ಹೆಚ್ಚಿನ ಸಾಲುಗಳು ಹಾನಿಗೊಳಗಾಗಿವೆ, ಓದಬಹುದಾದ ಕೆಲವು ಸಾಲುಗಳನ್ನು ಆಧರಿಸಿ ಈ ಶಾಸನವು ಅಳುಪ ವಂಶದ ಮೊದಲ ಕುಲಶೇಖರನ ಅವಧಿಗೆ ಸೇರಿದೆ ಎಂದು ಊಹಿಸಲಾಗಿದ್ದು, ಶಾಸನದಲ್ಲಿ ಕಾಲಗಣನೆಯನ್ನು ಶಕ ವರ್ಷ 1112, ಸಾಧಾರಣ ಸಂವತ್ಸರ, ಜ್ಯೇಷ್ಟ ಮಾಸ 11, ಗುರುವಾರ ಎಂದು ಉಲ್ಲೇಖಿಸಲಾಗಿದೆ.
ರಾಜ ಕುಲಶೇಖರನು ಮಂಗಳೂರಿನಲ್ಲಿ (ಮಂಗಳಾಪುರ) ತನ್ನ ಅರಮನೆಯಲ್ಲಿ ವಾಸವಾಗಿದ್ದಾಗ, ಈ ಭೂಮಿಯನ್ನು ದೇವರ ದಿನನಿತ್ಯದ ಪೂಜೆ ಹಾಗೂ ನೈವೇದ್ಯ ಖರ್ಚಿಗಾಗಿ ಬನಹಾಡಿ (ಬನ್ನಾಡಿ)ಯ ಬಸಪ್ಪ ಎಂಬುವರಿಗೆ ದಾನವಾಗಿ ನೀಡಲಾಯಿತು ಎಂದು ಶಾಸನದಲ್ಲಿ ಉಲ್ಲೇಖಿಸಿದೆ.
ಅಂದಿನ ಬನಹಾಡಿ ಈಗಿನ ಬನ್ನಾಡಿಯ ಹೆಸರಾಗಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಪ್ರವೀಣ್ ಆಚಾರ್ಯ ಸಾಲಿಗ್ರಾಮ, ಕಿಶನ್ ಕುಮಾರ್ ಮೂಡುಬೆಳ್ಳೆ ಹಾಗೂ ಸ್ಥಳೀಯರು ಭೇಟಿ ನೀಡಿ ಸಹಾಯ ಹಸ್ತ ಚಾಚಿದ್ದಾರೆ.