ಉಡುಪಿ, ಜ 25 (DaijiworldNews/HR): ಬಾರ್ಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ ಜಯಂತಿಯನ್ನು ಯುವ ದಿನವನ್ನಾಗಿ ಆಚರಿಸಿದ್ದು, ಕಾಲೇಜಿನ ಮಹಿಳಾ ಉಪನ್ಯಾಸಕಿಯೊಬ್ಬರು ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಉಪನ್ಯಾಸಕಿಯ ವಿರೋಧದ ನಡುವೆಯೇ ವಿದ್ಯಾರ್ಥಿಗಳು ಯುವ ದಿನಾಚರಣೆಯನ್ನು ಆಚರಿಸಿದ್ದು, ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳನ್ನು ತರಗತಿಯ ಹೊರಗೆ ನಿಲ್ಲುವಂತೆ ಉಪನ್ಯಾಸಕಿ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಂದ ರಜೆ ಅರ್ಜಿಯನ್ನೂ ಕೂಡ ಕೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಇತಿಹಾಸ ಉಪನ್ಯಾಸಕರೊಬ್ಬರು ವಿವೇಕಾನಂದರ ಕುರಿತು ಉಪನ್ಯಾಸ ನೀಡಿದ್ದು, ಮೂರು ದಿನಗಳ ನಂತರ ಉಪನ್ಯಾಸಕಿ ಇತಿಹಾಸ ಉಪನ್ಯಾಸಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗುತ್ತಿದೆ ಎಂದು ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಲೇಜು ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಮತ್ತು ಗ್ರಂಥಪಾಲಕರನ್ನೂ ಸಹ ಆಕೆಯ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ಉಪನ್ಯಾಸಕರು ವಿವೇಕಾನಂದರ ಕುರಿತು ಭಾಷಣ ಮಾಡಿದಕ್ಕೆ ಮಹಿಳಾ ಉಪನ್ಯಾಸಕಿ ಉಪನ್ಯಾಸಕನಿಗೂ ತರಗತಿ ಪ್ರವೇಶಕ್ಕೆ ತಡೆಯೊಡ್ಡಿದ್ದು, ಈ ಬಗ್ಗೆ ಇತಿಹಾಸ ಉಪನ್ಯಾಸಕರು ಪ್ರಾಂಶುಪಾಲರಿಗೆ ದೂರು ಸಲ್ಲಿಸಿದ್ದರು.