ಬಂಟ್ವಾಳ, ಜ 25 (DaijiworldNews/KP): ಅಡ್ಡಹೊಳೆ ಮತ್ತು ಬಿ.ಸಿ.ರೋಡ್ನಿಂದ ರಾಷ್ಟ್ರೀಯ ಹೆದ್ದಾರಿ 75ರ ಅಭಿವೃದ್ಧಿಗೆ ನಿಯೋಜಿಸಲಾದ ಟೆಂಡರ್ ತ್ವರಿತಗತಿಯಲ್ಲಿ ಸಾಗುತ್ತಿದ್ದು, 2023ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸೋಮವಾರ 24ರಂದು ಬಿ.ಸಿ.ರೋಡ್ ಮತ್ತು ಕಲ್ಲಡ್ಕ ನಡುವಿನ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 75ರ ಅಭಿವೃದ್ಧಿಗಾಗಿ ಬಿ.ಸಿ.ರೋಡ್-ಪುಂಜಾಲಕಟ್ಟೆ ನಡುವಿನ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ, ಉಳಿದಂತೆ ಪಾಣೆಮಂಗಳೂರು ಮತ್ತು ಉಪ್ಪಿನಂಗಡಿಯಲ್ಲಿ ಸೇತುವೆಯನ್ನು ಮತ್ತು ಕಲ್ಲಡ್ಕದಲ್ಲಿ ಮೇಲ್ಸೇತುವೆಯನ್ನು ನಿರ್ಮಿಸಲಾಗುವುದು. ಕಾಮಗಾರಿಯ ಬಗ್ಗೆ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಬಿಕ್ಕರ್ನಕಟ್ಟೆ-ಸಾಣೂರು ನಡುವಿನ ರಸ್ತೆ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಪುಂಜಾಲಕಟ್ಟೆ-ಚಾರ್ಮಾಡಿ ನಡುವಿನ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಸಕಲೇಶಪುರ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಗಡ್ಕರಿ ಅವರಿಗೆ ಒತ್ತಾಯಿಸಿದ್ದೇನೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಮಂಗಳೂರನ್ನು ಸಂಪರ್ಕಿಸುವ ಶಿರಾಡಿಘಾಟ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಕಾಮಗಾರಿ ಆರಂಭಿಸಿ ತಿಂಗಳುಗಳೇ ಕಳೆದಿದೆ, ಆದರೆ ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಶಿರಾಡಿ ಘಾಟ್ ರಸ್ತೆಯನ್ನು ಮುಚ್ಚಲು ಮನವಿ ಸಲ್ಲಿಸಲಾಗಿತ್ತು, ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು ಅಧಿಕಾರಿಗಳು ಪರ್ಯಾಯ ಯೋಜನೆಗಳನ್ನು ಪರಿಶೀಲಿಸಿದ ನಂತರಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಸಚಿವ ಎಸ್.ಅಂಗಾರ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ಬ್ಲಾಕ್ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕೆಎನ್ಆರ್ ಕಂಪನಿ ಪ್ರತಿನಿಧಿಸಿದ್ದ ದೀಪಕ್ ಕುಮಾರ್ ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿ ಮಂಜುನಾಥ. ಇನ್ನಿತರರು ಕಾಮಗಾರಿ ಪರಿಶೀಲನೆ ನಡೆಸಿದರು.