ವಿಶೇಷ ವರದಿ: ಆರ್.ಬಿ.ಜಗದೀಶ್
ಕಾರ್ಕಳ, ಜ 25 (DaijiworldNews/HR): ತಾಲೂಕು ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ರೋಗ ಕಂಡು ಬಂದಿದ್ದು, ಈಗಾಗಲೇ ಸುಮಾರು 100ಕ್ಕೂ ಮಿಕ್ಕಿ ಜಾನುವಾರುಗಳು ಈ ರೋಗದಿಂದ ಬಳಲುತ್ತಿದ್ದರೆ, ಕೆಲವಾರು ರೋಗದ ತೀವ್ರತೆಯಿಂದ ಸಾವಿಗೀಡಾದ ಘಟನೆ ಬೆಳಕಿಗೆ ಬಂದಿದೆ.
ಕಾರ್ಕಳ ನಗರ, ಕುಕ್ಕುಂದೂರು ನಲ್ಲಿ ಅತೀ ಹೆಚ್ಚು ಪ್ರಕರಣಗಳು ನಡೆದಿದ್ದು, ಅದರ ಆಸುಪಾಸುಗಳಲ್ಲಿ ಕೆಲವೊಂದು ಗ್ರಾಮಗಳಲ್ಲಿ ಈ ರೋಗ ಉಲ್ಬಣಿಸುತ್ತಿದೆ.
ತಾಲೂಕು ವ್ಯಾಪ್ತಿಯಲ್ಲಿ 40,947ಜಾವಾರುಗಳಿದ್ದು,2021 ಡಿಸೆಂಬರೆ 17ರಿಂದ 2022 ಜನವರಿ 15ರ ತನಕ ಕಾಲು ಬಾಯಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಲಸಿಕಾ ಅಭಿಯಾನ ನಡೆಸಲಾಗಿದೆ. ಅದರಲ್ಲಿ 38,872 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಉಳಿದ ಜಾನುವಾರುಗಳು ಗಬ್ಬದಾಗಿದ್ದು ಹಾಗೂ 4 ತಿಂಗಳ ಒಳಗಿನ ಕಾರುಗಳಾಗಿರುತ್ತದೆ. ಫೆಬ್ರವರಿ ಹಾಗೂ ಎಪ್ರಿಲ್ ತಿಂಗಳಿನಲ್ಲಿ ನಡೆಸಲಾಗುವ ಕಾಲು ಬಾಯಿ ರೋಗ ಲಸಿಕಾ ಅಭಿಯಾನದ ವೇಳೆಗೆ ಅವುಗಳಿಗೆ ಲಸಿಕೆ ನೀಡಲಾಗುತ್ತದೆ ಎಂಬ ಮಾಹಿತಿ ಇಲಾಖೆಯದಾಗಿದೆ.
2021 ನವಂಬರ್ ತಿಂಗಳಿನಲ್ಲಿ ಜಾನುವಾರುಗಳಿಗೆ ಲಸಿಕೆಯನ್ನು ಅಂತಿಮವಾಗಿ ನೀಡಿದ್ದು, ನಂತರದ ದಿನಗಳಲ್ಲಿ ಕಂಡುಬಂದ ಕರೋನಾ ಹೆಚ್ಚವಳದಿಂದಾಗಿ ಜಾನುವಾರುಗಳಿಗೆ ಲಸಿಕೆ ನೀಡಲು ಸಾಧ್ಯವಾಗಿರಲಿಲ್ಲ.
ರೋಗದ ಮೂಲವೇ ವೈರಸ್ :
ಕಾಲು-ಬಾಯಿ ರೋಗವು ವೈರಸ್ ರೂಪದಲ್ಲಿ ಹರಡುತ್ತಿದ್ದು, ದನ,ಕರು, ಎಮ್ಮೆ,ಎತ್ತು, ಕುರಿ, ಮೇಕೆ, ಆಡುಗಳಲ್ಲಿ ಹೆಚ್ಚಾಗಿ ಕಂಡು ಬರುವ ರೋಗ ಇದಾಗಿದೆ. ತೀವ್ರ ಜ್ವರ,ನಾಲಗೆಯಲ್ಲಿ ಹುಣ್ಣು, ಬಾಯಿಯಲ್ಲಿ ಜೊಲ್ಲು, ಕಾಲು ಗೊರಸುಗಳ ನಡುವೆಯೂ ಹುಣ್ಣು ಕಾಣಿಸಿಕೊಳ್ಳುತ್ತದೆ. ನೊಣಗಳ ಹಾವಳಿ ಹೆಚ್ಚಿದಂತೆ ಹುಣ್ಣಿನಲ್ಲಿ ಕೀವುಗಳಾಗಿ ಹುಳುಗಳಾಗುತ್ತದೆ. ಇದರಿಂದ ಜಾನುವಾರುಗಳಿಗೆ ನಡೆದಾಡುವುದಕ್ಕೂ ಕಷ್ಟಪಡುತ್ತದೆ. ಆ ಸಂದರ್ಭದಲ್ಲಿ ಅವುಗಳು ಕುಂಟುತ್ತಾ ಸಾಗುತ್ತದೆ. ಅಲ್ಲದೇ ಮೇವು ತಿನ್ನುವುದಕ್ಕೆ ಸಾಧ್ಯವಾಗುವುದಿಲ್ಲ. ರೋಗ ಇನ್ನಷ್ಟು ಉಲ್ಭಣ ಗೊಂಡರೆ ಜಾವುವಾರುಗಳು ಸಾವು ಸಂಭವಿಸಬಹುದು. ಗಬ್ಬ ಜಾನುವಾರುಗಳಾದರೆ ಗರ್ಭಪಾತವೇ ಹೆಚ್ಚಾಳವಾಗಿ ಸಾವು ಸಂಭವಿಸಬಹುದಾಗಿದೆ. ಕೆಲ ಹಸುಗಳ ಕೆಚ್ಚಲುಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ.
ರೋಗ ಪೀಡಿತ ದನಗಳ ಬಾಯಿ ಮತ್ತು ಗೊರಸುಗಳನ್ನು ಶೇ 1ರ ಪೊಟ್ಯಾಶಿಯಂ ಪರ್ಮಾಂಗನೇಟ್ ದ್ರಾವಣದಿಂದ ತೊಳೆದು ಅಂಟಿಸೆಪ್ಟಿಕ್ ಲೋಶನ್ ನ್ನು ಲೇಪಿಸಬೇಕು. ಬಾಯಿಯ ಹುಣ್ಣುಗಳಿಗೆ ಬೋರಿಕ್ ಅಸಿಡ್ ಮತ್ತು ಗ್ಲಿಸರಿನ್ ಮಿಶ್ರಣ ಲೇಪಿಸಬೇಕು.
ರೋಗ ಪೀಡಿತ ಜಾನುವಾರುಗಳಿಗೆ ರುಚಿಕಟ್ಟಾದ ಮತ್ತು ಮೆತ್ತಗಿನ ಆಹಾರ ನೀಡಿ ಬೇರೆ ದನಗಳಿಂದ ಬೇರ್ಪಡಿಸಿ ಉಪಚರಿಸಬೇಕು.
ದನಗಳು, ಕುರಿ, ಆಡು ಮತ್ತು ಹಂದಿಗಳಿಗೆ ಪ್ರತೀ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಬೇಕು. ಬೇಸಿಗೆ (ಎಪ್ರಿಲ್/ಮೇ) ಹಾಗೂ ಚಳಿಗಾಲ (ಅಕ್ಟೋಬರ್/ನವ್ಹೆಂಬರ್) ಗಳಲ್ಲಿ ಹಾಕಿಸುವುದು ಸೂಕ್ತ. ಕರುಗಳಿಗೆ ಮೊದಲನೆಯ ಸಲ 4 ತಿಂಗಳಾದಾಗ, ನಂತರ 5 ನೆಯ ತಿಂಗಳಿಗೆ, ತದನಂತರ ಪ್ರತೀ 6 ತಿಂಗಳಿಗೊಮ್ಮೆ ವೃಧ್ಧಿತ ಪರಿಮಾಣವನ್ನು ನೀಡಬೇಕು.
ಕಾಲುಬಾಯಿ ರೋಗವು ಒಂದು ಜಾನುವಾರಿನಿಂದ ಇನ್ನೊಂದು ಜಾನುವಾರುಗಳಲ್ಲಿ ಹರಡುತ್ತದೆ. ರೋಗ ಗ್ರಾಸ್ತ ಜಾನುವಾರಿನಿಂದ ಜೊಲ್ಲು, ಮೂತ್ರ, ಸೆಗಣಿ, ವೀರ್ಯ, ಹಾಲು ಮೂಲಕ ವಿಸರ್ಜೀಸುತ್ತದೆ. ಈ ವಸ್ತುವಿನಿಂದ ಕಲುಷಿತಗೊಂಡ ಗಾಳಿ, ಆಹಾರ, ನೀರಿನ ಮೂಲಕವು ರೋಗ ಹರಡುತ್ತದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳ ಜಾತ್ರೆ ನಿಷೇದಿಸಿಬೇಕು. ಮೇವಿಗೆ ಬಿಡುವುದನ್ನು ನಿಲ್ಲಿಸಬೇಕು. ಕಟ್ಟಿಹಾಕಿ ಆರೈಕೆ ಮಾಡುವುದರಿಂದ ರೋಗ ಹರಡದಂತೆ ಎಚ್ಚರಿಕೆ ವಹಿಸಬಹುದು.
ಕಾರ್ಕಳದ ತೆಳ್ಳಾರು ಸಂಕದ ಬಳಿಯ ಕಾವೇರಡ್ಕ ಪ್ರದೇಶದ ಲೀಲಾ ಶೆಡ್ತಿ, ಕಲ್ಯಾಣಿ ಪೂಜಾರಿ ಎಂವರಿಗೆ ಸೇರಿದ ೪ ಜಾನುವಾರುಗಳು ಕಾಲುಬಾಯಿ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿದೆ. ಅದರಲ್ಲಿ ಕರುಗಳು ಒಳಗೊಂಡಿವೆ. ಇನ್ನಷ್ಟು ಜಾನುವಾರು ತೀವ್ರತರದಲ್ಲಿ ಅಸ್ವಸ್ಥಗೊಂಡಿವೆ.
ಇನ್ನು ಕಾರ್ಕಳ ತಾಲೂಕಿನ ಹಲವು ಗೋಶಾಲೆಗಳಿಗೂ ಇದೆ ಬಿಸಿ ತಟ್ಟಿದೆ. ಕಾಲುಬಾಯಿ ರೋಗಕ್ಕೆ ತುತ್ತಾಗಿರುವ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟಿ ಹಾಕಿ ಚಿಕಿತ್ಸೆ ನೀಡುತ್ತಿದ್ದಾರೆ. ಈ ರೋಗದ ಕುರಿತು ಮುನ್ನೆಚ್ಚರಿಕೆ ವಹಿಸದೇ ಹೋದಲ್ಲಿ ಹೈನುಗಾರಿಕೆ ಮೇಲೆ ಭಾರೀ ಹೊಡೆದ ಬೀಳಲಿದೆ ಎಂದು ಕಾರ್ಕಳ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ. ರಾಜಶೇಖರ ಹೇಳಿದ್ದಾರೆ.
ಕಾಲುಬಾಯಿ ರೋಗಕ್ಕೆ ತುತ್ತಾಗುವ ಜಾನುವಾರುಗಳ ಪೈಕಿ ದನಕ್ಕಿಂತ ಕರುಗಳಿಗೆ ಕಂಟಕ ಜಾಸ್ತಿ. ದನಗಳಲ್ಲಿ ಕಂಡುಬರುವ ಈ ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ದೊರೆತರೆ ಮೂರು ದಿನಗಳೊಳಗಾಗಿ ಸಂಪೂರ್ಣ ರೀತಿಯಲ್ಲಿ ಗುಣಪಡಿಸಬಹುದು. ದನದ ಕೊಟ್ಟಿಗೆಯನ್ನು ಶೇ. 4 ಸೋಡಿಯಾ ಕರ್ಬನೈಟ್ ಮೂಲಕ ಸ್ವಚ್ಚಗೊಳಿಸಬೇಕು. ರಾಗಿ ಗಂಜಿ, ಹಸಿ ಹುಲ್ಲು,ಬಾಳೆ ಹಣ್ಣು ಸೇರಿದಂತೆ ಮೆತ್ತಾಗಿನ ಆಹಾರವನ್ನೇ ನೀಡಬೇಕು.