ಉಡುಪಿ, ಜ. 24 (DaijiworldNews/SM): ಉಡುಪಿಯ ಕಡೆಕಾರಿನ ಅಂತಾರಾಷ್ಟ್ರೀಯ ಈಜುಪಟು ಗಂಗಾಧರ್ ಮತ್ತೊಮ್ಮೆ ಕೈಗೆ ಕೋಳ ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ 5 ಗಂಟೆ, 3550 ಮೀಟರ್ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಇಂದು ಸೋಮವಾರ ದಾಖಲೆ ಸೃಷ್ಟಿ ಮಾಡಿದ್ದಾರೆ.
ಗಂಗಾಧರ್ ಅವರು ನಿರಂತರ 5:30 ಗಂಟೆ ಕಾಲ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲು ಮಾಡಿದ್ದಾರೆ. ಉಡುಪಿಯ ಪಡುಕೆರೆ ಬೀಚ್ ತೀರದಿಂದ ಬೆಳಗ್ಗೆ 7.50 ಕ್ಕೆ ಸಮುದ್ರಕ್ಕೆ ಜಿಗಿದಿದ್ದು, ಮಧ್ಯಾಹ್ನ 1.20 ಕ್ಕೆ ದಡ ತಲುಪಿದ್ದಾರೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನ ಪ್ರತಿನಿಧಿಯಾದ ಸಮುದ್ರದಲ್ಲೇ ನಿಗಾ ಇಟ್ಟಿದ್ದರು. ಈಜು ಮುಗಿದು ದಡ ಸೇರುತ್ತಿದ್ದಂತೆ, ಸ್ಥಳದಲ್ಲೇ ಪ್ರಾವಿಜನ್ ಸರ್ಟಿಫಿಕೇಟ್ ವಿತರಣೆ ಮಾಡಿದ್ದಾರೆ.
ಈಜುಗಾರ ಗಂಗಾಧರ 60ನೇ ವಯಸ್ಸಿನಲ್ಲಿ ಸಮುದ್ರದ ಈಜು ಕರಗತ ಮಾಡಿದ್ದಾರೆ. ಐದೇ ವರ್ಷಕ್ಕೆ ಎರಡು ರಾಷ್ಟ್ರೀಯ ಅಂತರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನಕ್ಕೆ ಈಗಾಗಲೇ ಈಜು ತರಬೇತಿಯನ್ನು ನೀಡಿದ್ದಾರೆ. ಸಾಧನೆಗೆ ವಯಸ್ಸಿಲ್ಲ ಎಂಬುದಕ್ಕೆ ಉಡುಪಿಯ ಗಂಗಾಧರ್ ಉದಾಹರಣೆಯಾಗಿದೆ.
"ನನಗೆ ಬಹಳ ಖುಷಿಯಾಯಿತು. ಈ ವಯಸ್ಸಿನಲ್ಲಿ ದಾಖಲೆ ಮಾಡಲು ಆಗುತ್ತದಾ ಎಂಬ ಸಂಶಯ ಇತ್ತು. ಆದರೆ ಈಗಿನ ಸಂದರ್ಭ ಯಾವುದೇ ಸಮಸ್ಯೆಗಳು ಆಗಿಲ್ಲ. ಹೋದವರ್ಷ ಪದ್ಮಾಸನ ಬಂಗಿಯಲ್ಲಿ ನಾನು ಈಜಿ ದಾಖಲೆ ಮಾಡಿದ್ದಾರೆ ಸತತ ಪರಿಶ್ರಮದಿಂದ ಕಾಲಿಗೆ ಸರಪಳಿ ಕಟ್ಟಿಕೊಂಡು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಲ್ಲರಿಗೂ ಧನ್ಯವಾದ. 60 ವರ್ಷ ದಾಟಿದ ಮೇಲೆ ಸಮುದ್ರದಲ್ಲಿ ಈಜನ್ನು ಇನ್ನಷ್ಟು ಕರಗತಮಾಡಿಕೊಂಡೆ. ನಾನು ನನ್ನ ಕೆಲಸದಲ್ಲಿ ನಿವೃತ್ತನಾದ ಮೇಲೆ ಮಕ್ಕಳಿಗೆ ಉಚಿತವಾಗಿ ಈಜು ಕಲಿಸುತ್ತಿದ್ದೇನೆ. ಜೀವನದಲ್ಲಿ ನಾವು ಏನಾದ್ರೂ ಸಾಧನೆ ಮಾಡಬೇಕು ಎಂದು ನಂಬಿದವನು. ಕಡಲಿನಲ್ಲಿ ಸಿಕ್ಕಾಪಟ್ಟೆ ಗಾಳಿಸು ಅಬ್ಬರ ಜಾಸ್ತಿ ಇತ್ತು ನಾನು ಅಂದುಕೊಂಡಂತೆ ಸಮುದ್ರ ಇರಲಿಲ್ಲ ಹಾಗಾಗಿ ಸ್ವಲ್ಪ ಕಷ್ಟ ಆದರೆ ನಾನು ಛಲ ಬಿಡಲಿಲ್ಲ", ಎಂದು ಗಂಗಾಧರ್ ಹೇಳುತ್ತಾರೆ.
ರಾಜ್ಯ, ರಾಷ್ಟ್ರಮಟ್ಟ ಪ್ರಶಸ್ತಿ:
'ಸ್ಟೇಟ್, ಮಾಸ್ಟರ್ ಅಕ್ವಾಟಿಕ್ ಚಾಂಪಿಯನ್ಶಿಪ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, 2009ರಿಂದ 2019ರ ವರೆಗೆ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಒಟ್ಟು 31 ಚಿನ್ನ, 16ಬೆಳ್ಳಿ 9 ಕಂಚಿನ ಪದಕ ಪಡೆದಿದ್ದಾರೆ. ಗುಜರಾತಿನ ರಾಜ್ಕೋಟ್ನಲ್ಲಿ ಮಧ್ಯಪ್ರದೇಶದ ಭೋಪಾಲ್ನಲ್ಲಿ ಆಂಧ್ರದ ಸಿಕಂದರಾಬಾದ್ನಲ್ಲಿ ವಿಶಾಖ ಪಟ್ಟಣದಲ್ಲಿ ಉತ್ತರ ಪ್ರದೇಶದ ಲಕ್ನೊದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ, ಮೂರು ಕಂಚಿನ ಪದಕಗಳನ್ನು ಪಡೆದು ಹಾಗೂ “ಮಾಸ್ಟರ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ” ನಡೆಸಿದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆದು ರಾಜ್ಯಕ್ಕೆ ಹಾಗೂ ನಮ್ಮ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.