ಕಾರ್ಕಳ, 24 (DaijiworldNews/MS): ದುರ್ಗ ಮಲೆಬೆಟ್ಟುನಲ್ಲಿ ಸಂಭವಿಸಿದ ರಸ್ತೆ ಅಫಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಪ್ರಕರಣದ ತಪಿಸ್ಥನೆಂದು ಕಾರ್ಕಳ 2ನೇ ಹೆಚ್ಚುವರಿ ಸಿ.ಜೆ. ಮತ್ತು ಜೆಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಚೇತನಾ ಎಸ್.ಎಫ್ ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದಾರೆ.
2009ರಲ್ಲಿ ಈ ಘಟನೆ ನಡೆದಿದ್ದು, ಕಾರಿನ ಚಾಲಕನಾಗಿದ್ದ ಕಾರ್ಕಳ ಮಿಯಾರು ಅಡ್ಕರಪಲ್ಕೆಯ ಆಶೋಕ ಆಚಾರ್ಯ ಒಂದನೇ ಆರೋಪಿ. ಹೊಗೆ ತಪಾಸಣೆ ಪ್ರಮಾಣ ಪತ್ರವನ್ನು ಹೊಂದಿರದ ಕಾರಿನ ಮಾಲಕಿ ದುರ್ಗ ಗ್ರಾಮದ ಶಾಂತಿಪಲ್ಕೆಯ ಪವಿತ್ರ ಎರಡನೇ ಆರೋಪಿ. ಕೆ.ಎ 20ಝಡ್ 6618 ನಂಬ್ರದ ಮಾರುತಿ 800 ಕಾರನ್ನು ಕಾರ್ಕಳ ಮಲೆಬೆಟ್ಟು ಡಾಮಾರು ರಸ್ತೆಯಲ್ಲಿ ಕಾರ್ಕಳ ಕಡೆಯಿಂದ ಮಲೆಬೆಟ್ಟು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿರುವುದೇ ಘಟನೆಗೆ ಕಾರಣವಾಗಿರುತ್ತದೆ.
ಮಲೆಬೆಟ್ಟು ಕಡೆಯಿಂದ ಕಾರ್ಕಳ ಕಡೆಗೆ ಪ್ರಕಾಶ್ ಪೂಜಾರಿ ತನ್ನ ಮಗಳು ಪ್ರತೀಕ್ಷಾ ಇವರನ್ನು ಕೆಎ 20 ಈಎಫ್ 1091 ನಂಬ್ರದ ಬೈಕ್ನಲ್ಲಿ ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಚಲಾಯಿಸಿ ಬರುತ್ತಿದ್ದಾಗ ಕಾರು ಇವರು ಚಾಲಾಯಿಸಿ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಬೈಕ್ ಸವಾರ ಪ್ರಕಾಶ್ ಪೂಜಾರಿ ಗಂಭೀರ ಸ್ವರೂಪದಲ್ಲಿ ಹಾಗೂ ಸಹಸವಾರಿ ಪ್ರತೀಕ್ಷಾ ಸಾಮಾನ್ಯ ಸ್ವರೂಪದಲ್ಲಿ ಗಾಯಗೊಂಡಿದ್ದರು. ಈ ಕುರಿತು ಅಂದಿನ ಪಿಎಸೈ ನಾಸೀರ್ ಹುಸೈನ್ ಆರೋಪಿತರ ವಿರುದ್ಧ ಕಾರ್ಕಳ ನ್ಯಾಯಾಲಯಕ್ಕೆ ದೋಪಾರೋಪಣ ಪಟ್ಟಿ ಸಲ್ಲಿಸಿದ್ದರು.
ವಾದಿ-ಪ್ರತಿವಾದಿಗಳ ಹೇಳಿಕೆಗಳನ್ನು ಆಲಿಸಿದ ನ್ಯಾಯಾಧೀಶರು, ಒಂದನೇ ಆರೋಪಿ ಅಶೋಕ್ ಆಚಾರ್ಯ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದಾರೆ. ಸರಕಾರ ಪರ ಸಾಕ್ಷಿದಾರರ ವಿಚಾರಣೆಯನ್ನು ಈ ಹಿಂದಿನ ಸಹಾಯಕ ಅಭಿಯೋಜಕ ಜಗದೀಶ್ ಕೃಷ್ಣ ಜಾಲಿ ನಡೆಸಿದ್ದಾರೆ. ತದನಂತರ ವಾದವನ್ನು ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಮಂಡಿಸಿದ್ದಾರೆ.
ಒಂದನೇ ಆರೋಪಿಗೆ ವಿವಿಧ ಕಲಂಗಳಡಿಯಲ್ಲಿ ಒಟ್ಟಾಗಿ ರೂ.2,500 ದಂಡ, ದಂಡ ತಪ್ಪಿದಲ್ಲಿ ಎರಡುವರೆ ವರ್ಷ ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಲಾಗಿದೆ.