ಮಂಗಳೂರು, ಡಿ08(SS): ಹಸಿವಿನಿಂದ ಕಂಗಲಾಗಿ ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಬಿದ್ದಿದ್ದ ಅನಾಥ ವೃದ್ಧರೊಬ್ಬರಿಗೆ ಆಹಾರ ನೀಡಿ ಮಾನವಿಯತೆ ಮೆರೆದ ಹೃದಯಸ್ಪರ್ಶಿ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ನೇತ್ರಾವತಿ ಸೇತುವೆಯ ಮೇಲೆ ಈ ಘಟನೆ ನಡೆದಿದೆ. ಮಂಗಳೂರಿನ ಸಂಚಾರಿ ಪೊಲೀಸ್ ಠಾಣೆಯ ಮಹಿಳಾ ಸಿಬಂದಿ ಭಾಗ್ಯಶ್ರೀ ವೃದ್ಧ ವ್ಯಕ್ತಿಯನ್ನು ಉಪಚರಿಸಿ ಮಾನವೀಯತೆ ಮೆರೆದ ಮಹಿಳೆ.
ಸುಮಾರು 60 - 65 ವರ್ಷದ ವೃದ್ಧರೊಬ್ಬರು ಜಪ್ಪಿನಮೊಗರು ನೇತ್ರಾವತಿ ಸೇತುವೆಯ ಮೇಲೆ ಹಸಿವಿನಿಂದ ದಾರಿ ಕಾಣದೆ ಕಂಗಲಾಗಿ ಬಿದ್ದಿದ್ದರು. ತಕ್ಷಣ ಇದನ್ನು ಗಮನಿಸಿದ ಸಂಚಾರಿ ಪೊಲೀಸ್ ಠಾಣೆ ಸಿಬಂದಿ ಭಾಗ್ಯಶ್ರೀ ವೃದ್ಧ ವ್ಯಕ್ತಿಯ ಸಹಾಯಕ್ಕೆ ಬಂದಿದ್ದಾರೆ. ಮಾತ್ರವಲ್ಲ, ಭಾಗ್ಯಶ್ರೀ ವೃದ್ಧ ವ್ಯಕ್ತಿಗೆ ಕುಡಿಯುಲು ನೀರು, ತಿನ್ನಲು ಆಹಾರ ನೀಡಿ ಉಪಚರಿಸಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಸಂಚಾರಿ ಪೊಲೀಸ್ ಠಾಣೆಯ ಮಹಿಳಾ ಸಿಬಂದಿ ಭಾಗ್ಯಶ್ರೀ ಮಾಡಿರುವ ಮಾನವೀಯತೆಯ ಕೆಲಸಕ್ಕೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.