ಉಡುಪಿ, ಜ 24 (DaijiworldNews/KP): ಶೀಂಬ್ರಾ-ಕೊಳಲಗಿರಿ ರಸ್ತೆಯ ಅವ್ಯವಸ್ಥೆ ವಿರುದ್ದ ಸಿಡಿದೆದ್ದಿರುವ ಸ್ಥಳೀಯರೋರ್ವರು ‘ಬಂಗಾರದ ರಸ್ತೆಗೆ ಸುಸ್ವಾಗತ’ ಎಂಬ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
-
-
-
-
-
-
-
-
ರೋಡ್ ಕಾಣದೆ ಹೊಂಡ ಗುಂಡಿಗಳಿಂದ ತುಂಬಿರುವ ಧೂಳುಮಯ ರಸ್ತೆಯಿಂದ ಕಂಗೆಟ್ಟು, ಶಾಸಕ ರಘುಪತಿ ಚಿತ್ರ ಹಾಕಿ, ’ಬಂಗಾರದ ರಸ್ತೆಗೆ ಸ್ವಾಗತ: ಧೂಳು ಉಚಿತ, ಎದ್ದು ಬೀಳುವುದು ಖಚಿತ, ಇನ್ನು ಈ ರಸ್ತೆಗೆ ಮುಕ್ತಿ ನೀಡದೇ ಹೋದರೆ ನಮ್ಮ ಮತ ನೋಟಾ ಖಚಿತ’ ಎಂದು ಬ್ಯಾನರ್ನಲ್ಲಿ ವ್ಯಂಗ್ಯತ್ಮಾಕವಾಗಿ ಬರೆದು ಅವ್ಯವಸ್ಥೆಯ ವಿರುದ್ದ ಪ್ರತಿಭಟಿಸಿದ್ದಾರೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಕನಸಿನ ಯೋಜನೆಯಾಗಿದ್ದ ಸೇತುವೆಗೆ 16.22 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿತ್ತು, ಈ ಯೋಜನೆಯಿಂದ ಕಡಿಮೆ ವೆಚ್ಚದಲ್ಲಿ ಕುಂದಾಪುರ ಮತ್ತು ಮಣಿಪಾಲ ನಡುವಿನ ಪ್ರಮುಖ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮತ್ತು ಪ್ರಯಾಣಿಕರು ಜಿಲ್ಲಾ ಕೇಂದ್ರವನ್ನು ಕಡಿಮೆ ಸಮಯದಲ್ಲಿ ತಲುಪ ಬಹುದು ಎಂಬ ಕಾರಣದಿಂದ ಕೈಗೆತ್ತಿಕೊಳ್ಳಲಾಗಿತ್ತು. ಅದರಂತೆ ಅತ್ಯಂತ ಅಗತ್ಯವಾಗಿದ್ದ ಶಿಂಬ್ರಾ-ಕೊಳಲಗಿರಿ ಸೇತುವೆಯು ಕೆಲ ವರ್ಷಗಳ ಹಿಂದೆ ಪೂರ್ಣಗೊಂಡಿತ್ತು. ಆದರೆ ಪೆರಂಪಳ್ಳಿ ಭಾಗಕ್ಕೆ ಸಂಪರ್ಕಿಸುವ ಸಂಪರ್ಕ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ.
ಇನ್ನು ಈ ರಸ್ತೆಗೆ ಒಂದರ ಹಿಂದೆ ಒಂದರಂತೆ ಅಡಚಣೆಗಳು ಎದುರಿಗಿದ್ದು, ಮೊದಲನೆಯದಾಗಿ ಪೆರಂಪಳ್ಳಿ ಕೊನೆಯಲ್ಲಿರುವ ಪ್ರವೇಶ ರಸ್ತೆಯಲ್ಲಿ ಭೂಸ್ವಾಧೀನ ಸಮಸ್ಯೆಗಳನ್ನು ಎದುರಗಿತ್ತು ಬಳಿಕ ಹಲವು ಸುತ್ತಿನ ಮಾತುಕತೆ ನಂತರ ಸಮಸ್ಯೆ ಬಗೆಹರಿದಿದ್ದು. ಸದ್ಯ ವಾರಾಹಿ ಕುಡಿಯುವ ನೀರಿನ ಯೋಜನೆಗೆ ಪೈಪ್ಗಳನ್ನು ಹಾಕಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ರಸ್ತೆ ಯೋಜನೆಗೆ ಹಣದ ಕೊರತೆ ಏನು ಇಲ್ಲ, ಈ ಭಾಗದಲ್ಲಿ ನಡೆಯುತ್ತಿರುವ ವಾರಾಹಿ ಪೈಪ್ಲೈನ್ ಯೋಜನೆ 10-15 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ನಂತರ ಶಿಂಬ್ರ ಅಭಿವೃದ್ಧಿಗೆ ಪೆರಂಪಳ್ಳಿ-ಸಗ್ರಿ-ಇಂದ್ರಾಳಿ ರಸ್ತೆ ಯೋಜನೆಯು 7 ಕೋಟಿ ವೆಚ್ಚದಲ್ಲಿ ಎರಡು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ರಘುಪತಿ ಭಟ್ ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಪ್ರಯಾಣದ ಸಮಯ ಮತ್ತು ದೂರವನ್ನು ಮೂರು ಪಟ್ಟು ಕಡಿಮೆ ಮಾಡುವುದರಿಂದ ಕುಂದಾಪುರ-ಬ್ರಹ್ಮಾವರ-ಕೊಳಲಗಿರಿ ಕಡೆಯಿಂದ ಮಣಿಪಾಲಕ್ಕೆ ಬರುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಪ್ರಯಾಣಿಕರು ಹಗಲು-ರಾತ್ರಿ ಈ ರಸ್ತೆಯಲ್ಲಿ ಓಡಾಡುತಿರುವ ಕಾರಣದಿಂದ ರಸ್ತೆ ಸಂಪೂರ್ಣ ಜಲ್ಲಿಕಲ್ಲು ಹಾಗೂ ಮಣ್ಣಿನಿಂದ ತುಂಬಿದೆ.
ಮಣಿಪಾಲ-ಕುಂದಾಪುರಕ್ಕೆ ಶಾರ್ಟ್ಕಟ್ ಆಗಿದ್ದರಿಂದ ಈ ರಸ್ತೆಯನ್ನು ಪ್ರತಿನಿತ್ಯ ಅನೇಕ ಸ್ಥಳೀಯರು ಬಳಸುವುದರ ಜೊತೆಗೆ ಟ್ರಕ್ಗಳಂತಹ ದೊಡ್ಡ ವಾಹನಗಳಿಂದ ಉತ್ಪತ್ತಿಯಾಗುವ ಧೂಳಿನಿಂದಾಗಿ ಸಣ್ಣ ವಾಹನಗಳಿರುವ ಪ್ರಯಾಣಿಕರು ದಿನನಿತ್ಯ ಸಣ್ಣಪುಟ್ಟ ಅಪಘಾತಗಳಿಗೆ ಸಾಕ್ಷಿಯಾಗುತ್ತಿದೆ. ಅಪೂರ್ಣ ಕಾಮಗಾರಿಯಿಂದ ಈ ರಸ್ತೆಯ ಎರಡೂ ಬದಿಯ ಮನೆಗಳು ಧೂಳಿನಿಂದ ಆವೃತವಾಗಿದೆ. ಧೂಳನ್ನು ಕಡಿಮೆ ಮಾಡಲು ಅನೇಕ ನಿವಾಸಿಗಳು ಪ್ರತಿದಿನ ಎರಡು ಬಾರಿ ಮನೆಯನ್ನು ಸ್ವಚ್ಛಗೊಳಿಸುವ ಅನಿವಾರ್ಯತೆ ಬಂದಿದೆ.
ಡೈಜಿ ವಲ್ಡ್ನೊಂದಿಗೆ ಮಾತನಾಡಿದ ಮ್ಯಾಥ್ಯೂ ಡಿಸೋಜಾ, ನನ್ನ ಮನೆ ರಸ್ತೆಯಿಂದ ಸುಮಾರು 15 ಅಡಿ ದೂರದಲ್ಲಿದೆ, ಆದರೆ ಧೂಳಿನಿಂದ ತುಂಬಾ ತೊಂದರೆಯಾಗುತಿದ್ದು. ಅಪೂರ್ಣ ಕಾಮಗಾರಿಯಿಂದ ನಮ್ಮ ಆರೋಗ್ಯಕ್ಕೂ ಹಾನಿಯಾಗಿದೆ.ಈ ಸಮಸ್ಯೆಯ ಬಗ್ಗೆ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಕಾಮಗಾರಿಯನ್ನು ಚುರುಕುಗೊಳಿಸಿ ಪ್ರಯಾಣಿಕರಿಗೆ ಹಾಗೂ ಸ್ಥಳೀಯರಿಗೆ ಬಿಡುವು ನೀಡಬೇಕಿದೆ ಎಂದರು