ಮಂಗಳೂರು, ಜ 24 (DaijiworldNews/MS): ಕವಿ ಮುದ್ದಣ್ಣ ರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಕೇಂದ್ರ ಸರ್ಕಾರ ಹೊರತಂದ 150 ರೂಪಾಯಿಯ ಹೊಸ ನಾಣ್ಯವನ್ನು ಸಾಂಕೇತಿಕವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜ.24 ರ ಸೋಮವಾರ ಸರ್ಕಿಟ್ ಹೌಸ್ ನಲ್ಲಿ ಬಿಡುಗಡೆ ಮಾಡಿದರು.
ಈ ನಾಣ್ಯವನ್ನು 4 ಬಗೆಯ ಲೋಹಗಳ ಮಿಶ್ರಣದಿಂದ ತಯಾರಿಸಲಾಗಿದೆ.ಶೇ.50 ಬೆಳ್ಳಿ, ಶೇ.40 ತಾಮ್ರ, ಶೇ.05 ನಿಕಲ್ ಹಾಗೂ ಶೇ.05 ಸತು ಹೊಂದಿದೆ. ನಾಣ್ಯದ ಒಂದು ಕಡೆ (ಹೆಡ್)ಮಧ್ಯದಲ್ಲಿ ಅಶೋಕ ಸ್ತಂಭದ ಸಿಂಹದ ತಲೆ, ಕೆಳಗೆ 'ಸತ್ಯಮೇವ ಜಯತೆ' ಎಂದು ಬರೆದಿದೆ. ಬಲ ಬದಿಯ ವೃತ್ತದೊಳಗೆ 'ಭಾರತ್' ಎಂದೂ, ವೃತ್ತದೊಳಗೆ 'ಇಂಡಿಯಾ' ಎಂದು ಬರೆಯಲಾಗಿದೆ. ಸಿಂಹದ ತಲೆಯ ಕೆಳಗೆ ರೂ. ಚಿಹ್ನೆ ಹಾಗೂ ಮೌಲ್ಯ 150 ಎಂದು ಬರೆದಿದೆ. ನಾಣ್ಯದ ಮತ್ತೊಂದು ಭಾಗದ ಮಧ್ಯೆ ಕವಿ ಮುದ್ದಣನ ಚಿತ್ರ, ಮೇಲಿನ ವೃತ್ತದಲ್ಲಿ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಕವಿ ಮುದ್ದಣನ 150ನೇ ಜನ್ಮ ದಿನಾಚರಣೆ ಎಂಬ ಉಲ್ಲೇಖವಿದೆ.ಮುದ್ದಣನ ಚಿತ್ರದ ಕೆಳಗೆ 1870-2020 ಎಂದು ಬರೆಯಲಾಗಿದೆ.
ಕನ್ನಡ ನವೋದಯದ ಮುಂಗೋಳಿ ಎಂದು ಪ್ರಸಿದ್ಧರಾದ. ಮುದ್ದಣ (1870೦-1901) - ಕನ್ನಡ ಸಾಹಿತ್ಯಲೋಕದಲ್ಲಿ 'ಮಹಾಕವಿ' ಎಂದು ಖ್ಯಾತಿಪಡೆದ ಕವಿ/ಸಾಹಿತಿ. ಮುದ್ದಣ ಅವರ ನಿಜ ನಾಮಧೇಯ ಲಕ್ಷ್ಮಿನಾರಣಪ್ಪ. ಹುಟ್ಟೂರು ನಂದಳಿಕೆಯಾದ್ದರಿಂದ ನಂದಳಿಕೆ ಲಕ್ಷ್ಮಿನಾರಣಪ್ಪ ಎಂಬ ಹೆಸರು ಕೂಡ ಇವರಿಗಿದೆ. ರತ್ನಾವತಿ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ ಮತ್ತು ಶ್ರೀ ರಾಮಾಶ್ವಮೇಧ ಮುದ್ದಣ ಅವರು ಬರೆದಿರುವ ಕೆಲವು ಮುಖ್ಯವಾದ ಕೃತಿಗಳು.
ಸಂಸ್ಕೃತದಂತೆ ಕನ್ನಡದಲ್ಲೂ ಸಹಜ ಸುಂದರವಾಗಿ ಶಬ್ದ, ಅರ್ಥ, ಅಲಂಕಾರ ಸಹಿತ ಛಂದೋಗತಿಯ ಲಯದೊಂದಿಗೆ ಗದ್ಯ ಬರೆಯಲು ಸಾಧ್ಯ ಎಂದು ಈ ಕೃತಿಯ ಮೂಲಕ ತೋರಿಸಿಕೊಟ್ಟ ಮುದ್ದಣ್ಣ ಅವರಿಂದ ಇನ್ನೂ ಅನೇಕ ಮಹಾನ್ ಕೃತಿಗಳು ಹೊರಬರುವುದಿತ್ತು. ಕಿರಿಯ ವಯಸ್ಸಿಗೆ ಇಹಲೋಕ ಯಾತ್ರೆ ಮುಗಿಸಿದ್ದರು. ಕ್ಷಯರೋಗ ಅವರನ್ನು 31 ವರ್ಷಕ್ಕೇ ಬಲಿ ತೆಗೆದುಕೊಂಡಿತ್ತು. ಇಂದಿಗೂ ಕರ್ನಾಟಕದಲ್ಲಿನ ಶಾಲಾ ಕಾಲೇಜುಗಳಲ್ಲಿನ ಕನ್ನಡ ಸಾಹಿತ್ಯ ಪಠ್ಯಗಳಲ್ಲಿ ಮುದ್ದಣನವರ ಪದ್ಯ/ಗದ್ಯಗಳು ಹಾಸು ಹೊಕ್ಕಾಗಿವೆ.