ಬೆಳ್ತಂಗಡಿ, ಜ 24 (DaijiworldNews/MS): "ಸಮಾಜವನ್ನು ಒಡೆಯುವಂತಹ ಕೆಲಸವನ್ನು ಕಾಂಗ್ರೆಸ್ ಬೇರೆ ಬೇರೆ ಹಂತಗಳಲ್ಲಿ ಮಾಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಲು ಅವರಿಗೆ ಆಗುತ್ತಿಲ್ಲ. ಹೀಗಾಗಿ ಬಿಜೆಪಿ ಸರ್ಕಾರವನ್ನು ಟೀಕಿಸಲು ಕಾಂಗ್ರೆಸ್ ಗೆ ಏನೂ ಸಿಗದೆ ಬೇರೆ ವಿಚಾರ ಎತ್ತಿಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿದೆ" ಎಂದು ಸಚಿವ ಸುನೀಲ್ ಕುಮಾರ್ ಟೀಕಿಸಿದರು.
ಉಜಿರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು," ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರ ನಿಯಾಮವಳಿಗಳಲ್ಲಿ ಉದ್ದೇಶಪೂರ್ವಕವಾಗಿ ಮಾಡಿರುವಂತಹ ತಪ್ಪುಗಳು. ಅವರು ಶಂಕರಾಚಾರ್ಯರ ಜಟಾಯು, ನಾರಾಯಣ ಗುರುಗಳ ಸ್ತಬ್ಧ ಚಿತ್ರಗಳ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಕಳುಹಿಸಿಕೊಟ್ಟು, ತಿರಸ್ಕಾರ ಮಾಡಲು ಬೇಕಾದಂತಹ ಎಲ್ಲ ಸಿದ್ಧತೆಗಳನ್ನು ಕಮ್ಯೂನಿಸ್ಟ್ ಸರ್ಕಾರವೇ ಸ್ವತಃ ಸೃಷ್ಟಿಸಿಕೊಂಡು ನಾರಾಯಣ ಗುರುಗಳಿಗೆ ಅಪಮಾನವಾಗಿದೆ ಎನ್ನುವಂತಹ ವಿವಾದವನ್ನು ಹುಟ್ಟು ಹಾಕಿದೆ" ಎಂದು ಆರೋಪಿಸಿದರು
"ನಾರಾಯಣ ಗುರುಗಳ ಬಗ್ಗೆ ಅಪಾರವಾದ ಗೌರವವನ್ನು ಇಡೀ ಸಮಾಜ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಮೊದಲ ಬಾರಿ ಹೋದ ಸಂದರ್ಭದಲ್ಲಿ ನಾರಾಯಣ ಗುರುಗಳ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಪರಮ ಪೂಜ್ಯ ಸ್ವಾಮೀಜಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ಬಿಜೆಪಿ ಸರ್ಕಾರ ಬಂದ ನಂತರ. ಈ ರೀತಿ ಅಪಾರವಾದ ಗೌರವವನ್ನು ನಮ್ಮ ಸರ್ಕಾರ ನೀಡಿದೆ. ಆದರೆ, ಇವತ್ತು ಕೇರಳ ಸರ್ಕಾರ ಮಾಡಿದ ಗೊಂದಲವನ್ನು ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಎತ್ತಿಕೊಂಡಿದೆ" ಎಂದು ಹೇಳಿದರು.
ವಿದ್ಯುತ್ ಬೆಲೆ ಏರಿಕೆ ಇಲ್ಲ:
ವಿದ್ಯುತ್ ಬೆಲೆ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಈ ಹಿಂದೆ ಕೆಇ ಆರ್ ಸಿ ಪ್ರಸ್ತಾವನೆ ಮುಂದಿಟ್ಟರೆ ಮುಂದಿನ ದಿನಗಳಲ್ಲಿ ಯೋಚನೆ ಮಾಡಬೇಕು ಎಂದು ಹೇಳಿದ್ದೆ . ಆದರೆ ಸರ್ಕಾರದ ಮುಂದೆ ಇಂಥ ಪ್ರಸಾವ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.