ಕೋಟ, ಜ 24 (DaijiworldNews/MS): ಇಲ್ಲಿನ ಮಣೂರು ಪರಿಸರದ ಯುವ ಉತ್ಸಾಹಿ ಕೃಷಿಕ ಶಿವಾನಂದ ಅಡಿಗ ಸಮಗ್ರ ಕೃಷಿ ನೀತಿ ಅನುಸರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಕೊರೋನಾ ಸಂಕಷ್ಟದ ನಡುವೆಯೂ ನಿರಂತರವಾಗಿ ಕೃಷಿ ಕಾಯಕವನ್ನು ನಡೆಸಿಕೊಂಡು ಬರುತ್ತಿರುವ ಅಡಿಗರು ಇದೀಗ ಬೆಂಡೆ, ಸೌತೆ, ಜೋಳ, ಉದ್ದು, ಕಾಳುಮೆಣಸು, ತೆಂಗು, ಅಲಸಂಡೆ ಹೀಗೆ ನಾನಾ ರೀತಿಯ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.
ಹಿರಿಯರ ಬಳುವಳಿ ಹೊಸ ತಲೆಮಾರಿನ ಕಾಯಕ
ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದೆ. ಒಂದೆಡೆ ಬೆಳೆದ ಬೆಳೆಗೆ ಬೆಲೆ ಸಿಗದೆ ಸಾಲದ ಹೊರೆಹೊತ್ತು ಕೃಷಿ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿರುವ ರೈತ ಸಮುದಾಯ, ಇದೀಗ ಅಯಾ ಪ್ರದೇಶಗಳಲ್ಲಿ ಕೃಷಿ ಉಳಿಸಬೇಕೆಂಬ ತುಡಿತದೊಂದಿಗೆ ಹೊಸ ಹೊಸ ಕೃಷಿ ನೀತಿಗಳೊಂದಿಗೆ ಹಿರಿಯರು ನೀಡಿದ ಬಳುವಳಿಯನ್ನು ಉಳಿಸಿಕೊಂಡು ಲಾಭದಾಯಕ ಕೃಷಿಗೆ ಮುನ್ನುಡಿ ಬರೆಯುತ್ತಿದ್ದಾರೆ ಅದರಲ್ಲೂ ಮಣೂರಿನ ಹಿರಿಯ ಕೃಷಿಕ ದಿ. ನರಸಿಂಹ ಅಡಿಗರ ಪುತ್ರ ಶಿವಾನಂದ ಅಡಿಗರು ಒರ್ವರು ಎನ್ನಬಹುದಾಗಿದೆ.
ಸಂಕಷ್ಟ ಕಾಲದಲ್ಲಿ ಬೆಳೆಗೆ ಮುನ್ನುಡಿ
ಇತ್ತೀಚಿಗಿನ ದಿನಗಳಲ್ಲಿ ದಿನಬಳಕೆಯ ತರಕಾರಿ ದರಗಳು ಗಗನಕ್ಕೆರುತ್ತಿರುವ ಸಂದರ್ಭದಲ್ಲಿ ಕೃಷಿ ಮಾರುಕಟ್ಟೆಗೆ ಅನುಕೂಲಕರ ತರಕಾರಿಗಳಾದ ಅಲಸಂಡೆ,ಸೌತೆ,ಬೆಂಡೆ,ಕಾಳುಮೆಣಸು ಹೀಗೆ ನಾನಾ ರೀತಿಯ ತರಕಾರಿಗಳನ್ನು ಬೆಳೆದು ಲಾಭದಾಯಕ ಹಾಗೂ ಸಂಕಷ್ಟ ಕಾಲಕ್ಕೆ ತರಕಾರಿ ಬೆಳೆದು ಕೃಷಿಮಾರುಕಟ್ಟೆಗೂ ನೆರವಾಗುವ ಕೆಲಸಕ್ಕೆ ಸಾಕ್ಷಿಯಾಗಿದ್ದಾರೆ.
ಆರು ಎಕ್ರೆ ಪ್ರದೇಶದಲ್ಲಿ ಕೃಷಿ !
ತನ್ನ ಹಿರಿಯರು ಉಳಿಸಿಕೊಂಡು ಬಂದಿರುವ ಆರು ಎಕ್ಕರೆ ಭೂಮಿಯಲ್ಲಿ ಮೂರು ಎಕ್ಕರೆ ತೆಂಗು,ಅಡಿಕೆ,ಕಾಳು ಮೆಣಸು ಬೆಳೆಸುತ್ತಿರುವ ಅಡಿಗರು ಇನ್ನುಳಿದ ಮೂರು ಎಕ್ರೆ ಭೂಮಿಯಲ್ಲಿ ಶೇಂಗಾ,ಉದ್ದು,ಅವಡೆ, ಸೌತೆ ಇನ್ನಿತರ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಇವರ ಈ ಕಾರ್ಯಕ್ಕೆ ಪತ್ನಿ ಶುಭ ಅಡಿಗ, ಪುತ್ರಿ ಕೂಡಾ ಕೈಜೋಡಿಸಿ ಯಶಸ್ವಿ ಕೃಷಿಗೆ ಅಡಿಪಾಯ ಹಾಕುತ್ತಿದ್ದಾರೆ
ಕೃಷಿ ಕ್ಷೇತ್ರದಲ್ಲಿ ಅಧ್ಯಯನಕ್ಕಿಳಿದ ಅಡಿಗರು
ಕೃಷಿಮಾಡುವುದು ಸುಲಭವಲ್ಲ ಆ ಕ್ಷೇತ್ರದಲ್ಲೂ ಅನುಭವವು ಕೂಡಾ ಅತಿ ಮುಖ್ಯವಾಗಿದೆ.ಈ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುವ ಈ ಕಾಲಘಟ್ಟದಲ್ಲಿ ಯಂತ್ರಾಧಾರಿತ ಕೃಷಿಗಳ ಹಾಗೂ ಬೆಳೆಗಳ ಆಧಾರಿತ ನೀತಿಗಳ ಅಧ್ಯಯನಕ್ಕಾಗಿ ಅಡಿಗರು ಊರೂರು ಸುತ್ತಲು ಅಣಿಯಾದರೂ ಅದರಂತೆ ರಾಜ್ಯಾದ್ಯಂತ ಜಿಲ್ಲಾವಾರುಗಳಲ್ಲಿ ಆಯಾಭಾಗಗಳ ಕೃಷಿಕರನ್ನು ಸಂಪರ್ಕಿಸಿ ಕೃಷಿ ಕ್ಷೇತ್ರದಲ್ಲಿ ಅಧ್ಯಯನ ನಡೆಸಿ ಭಾಷ್ಯ ಕೂಡಾ ಬರೆದಿದ್ದಾರೆ.ಇದೊಂದು ಅನುಭವ ಆಧಾರಿತ ಕೃಷಿ ಎಂದರೆ ಅತಿಶಯೋಕ್ತಿಯಲ್ಲ
ಯುವ ಸಮುದಾಯಕ್ಕೆ ಅಡಿಗರೇ ಪ್ರೇರಣೆ!
ಕೃಷಿ ಕ್ಷೇತ್ರದಲ್ಲಿ ಯುವ ಸಮುದಾಯ ಕ್ಷಿಣಿಸುತ್ತಿರುವ ಕಾಲದಲ್ಲಿ ಅಡಿಗರ ಈ ಕೃಷಿ ನೀತಿ ಯುವ ಸಮುದಾಯವನ್ನು ವಿಶೇಷವಾಗಿ ಆಕರ್ಷಿಸುತ್ತಿದೆ.ತಾನು ಬೆಳೆಯುವದರೊಂದಿಗೆ ಇತರರಿಗೆ ಸ್ಪೂರ್ತಿದಾಯಕರಾಗಿರುವ ಅಡಿಗರು ಸಾಕಷ್ಟು ಯುವಕರಿಗೆ ತರಬೇತಿ ನೀಡುವ ಕನಸು ಹೊತ್ತಿದ್ದಾರೆ, ತನ್ನ ಹೊಲದಲ್ಲಿ ನಾನಾ ರೀತಿಯ ಕೃಷಿ ಬೆಳೆಯುವ ಇವರ ಈ ಕಾರ್ಯಕ್ಕೆ ಊರಿಗೆ ಊರೆ ಜಯಕಾರ ಹಾಕಿದೆ
ಸಾವಯವ ಕೃಷಿನೀತಿ
ಆಧುನಿಕ ಕಾಲಘಟ್ಟದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಅತಿಯಾಗಿ ವಿಜೃಂಭಿಸುತ್ತಿರುವ ಕಾಲದಲ್ಲಿ ಸಾವಯವ ಕೃಷಿ ನೀತಿ ಅನುಸರಿಸಿ ಆರೋಗ್ಯದಾಯಕ ಆಹಾರಕ್ಕೆ ಉತ್ತೇಜನ ನೀಡುತ್ತಿದ್ದಾರೆ,ತನ್ನ ಮನೆಯಂಗಳದಿ ಬೇರೆ ಬೇರೆ ಭಾಗಗಳ ಉದ್ಯಮಗಳ ಹಸಿ ಕಸವನ್ನು ಕಲೆಹಾಕಿ ಅದರಿಂದ ರಸ ತೆಗೆಯುವ ಹೊಸ ಪ್ರಯತ್ನಕ್ಕೂ ಸೈ ಎನ್ನಿಸಿಕೊಂಡಿದ್ದಾರೆ.
"ತನ್ನ ಕೃಷಿ ಕಾಯಕಕ್ಕೆ ತಂದೆಯವರ ಕೊಡುಗೆ ಅಪಾರ ಅವರ ಅಗಲುವಿಕೆಯ ನಂತರ ನಿರಂತರವಾಗಿ ತೋಡಗಿಸಿಕೊಂಡು ಬಂದಿದ್ದೇನೆ, ಆಧುನಿಕ ಕೃಷಿ ಪದ್ದತಿಯ ಜೊತೆ ಸಾಂಪ್ರದಾಯಕ ಕೃಷಿಯನ್ನು ಅನುಸರಿಸಿಕೊಂಡು ಬಂದಿದ್ದೇನೆ,ಕೃಷಿಯಲ್ಲಿ ಲಾಭದಾಯಕ ಇದ್ದೆ ಇದೆ ಆದರೆ ಪರಿಶ್ರಮ ಅತ್ಯಗತ್ಯ ಎಂಬುವುದನ್ನು ಮನಗಾಣಬೇಕು" - ಶಿವಾನಂದ ಅಡಿಗ ಮಣೂರು ಯುವ ಅನುಭವಿ ಕೃಷಿಕ