ಕಾರ್ಕಳ, ಜ 23 (DaijiworldNews/HR): ಒರಿಸ್ಸಾದ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದ ಕಾರ್ಕಳದ ಯುವಕನೊಬ್ಬ ಅದ್ಯಾವುದೋ ಕಾರಣದಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಇದ್ದ ಆತನನ್ನು ಅಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಿ ಊರಿಗೆ ಕರೆತರುತ್ತಿದ್ದಾಗ ದಾರಿಮಧ್ಯೆ ಮೃತಪಟ್ಟಿದ್ದನು. ಆತನ ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿ ಮೂರು ದಿನಗಳು ಕಳೆದರೂ ಮಾಹಿತಿ ತಿಳಿದ ಒರಿಸ್ಸಾ ಪೊಲೀಸರು ಅಗಮಿಸದೇ ನಿರ್ಲಕ್ಷ್ಯ ಕ್ರಮ ತೋರಿದರು. ಈ ಎಲ್ಲಾ ಬೆಳವಣಿಗೆಯ ಮಧ್ಯೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯ ಮುತುವರ್ಜಿಯಿಂದ ಕಾರ್ಕಳದ ನಗರ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ವಾರಿಸ್ತುದಾರರಿಗೆ ಶವವನ್ನು ಹಸ್ತಾಂತರಿಸಿದ ಘಟನೆ ನಡೆದಿದೆ.
ಕಾರ್ಕಳ ನಗರ ಠಾಣೆ
ಘಟನೆಯ ವಿವರ:
ಕಾರ್ಕಳ ನಗರದ ಬಂಗ್ಲೆಗುಡ್ಡೆ ಇಮ್ಮುಂಜೆ ರಸ್ತೆ ಕಾರ್ತೀಕ(25) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ಐದು ವರ್ಷಗಳಿಂದ ಮಂಗಳೂರು ಪ್ಲಾನ್ ಟೆಕ್ ಕಂಪನಿಯಲ್ಲಿ ಸೇಫ್ಟಿ ಸುಪರ್ ವೈಸರ್ ಆಗಿ ಕೆಲಸಕ್ಕೆ ಆಯ್ಕೆಯಾಗಿ ಪ್ರಸ್ತುತ 2 ತಿಂಗಳಿನಿಂದ ಒರಿಸ್ಸಾ ರಾಜ್ಯದ ಪಾರಾದೀಪ್ನಲ್ಲಿ ಪ್ಲಾನ್ ಟೆಕ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು.
ಜನವರಿ 18ರಂದು ಮಂಗಳೂರಿನ ಪ್ಲಾನ್ ಟೆಕ್ ಕಂಪನಿಯ ಮ್ಯಾನೇಜರ್ ಕುಶಲ್ ರವರು ಕಾರ್ತೀಕ್ನ ಮನೆ ಮಂದಿಗೆ ಕರೆ ಮಾಡಿ, ಒರಿಸ್ಸಾದ ಪಾರದೀಪ್ ಉದಯ್ ಬಾಠನ ಫ್ಲಾಟ್ ನಂ 1322ಇಲ್ಲಿ ವಾಸವಿದ್ದ ಕಾರ್ತೀಕ್ ಜನವರಿ 13ರಂದು ಯಾವುದೋ ವೈಯಕ್ತಿಕ ವಿಚಾರಕ್ಕೆ ಮನನೊಂದು ತನ್ನ ರೂಮಿನಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿದ್ದಾನೆ. ಆತನ ಸ್ನೇಹಿತರು ಸೇರಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಟಕ್ನ ರಿಲಾಕ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಆ ಮಾಹಿತಿಯಂತೆ ಕಾರ್ತೀಕ್ನ ಚಿಕ್ಕಪ್ಪ ರವೀಂದ್ರ ಸಂಬಂದಿಕರಾದ ವೇಲು ಮತ್ತು ಕೃಷ್ಣರವರು ಜನವರಿ 15ರಂದು ಕಾರ್ಕಳದಿಂದ ಹೊರಟು ಜನವರಿ 17ರಂದು ಕಟಕ್ ತಲುಪಿ ಕಟಕ್ನ ರಿಲಾಕ್ಸ್ ಆಸ್ಪತೆಗೆ ತಲುಪಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ತಿಕ್ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಕಾರ್ತಿಕ್ ಮನೆ ಮಂದಿ ಅಲ್ಲಿನ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಒರಿಯಾ ಬಾಷೆ ಮಾತನಾಡಲು ಬಾರದೇ ಇದ್ದುದರಿಂದ ಯಾವುದೇ ರೀತಿ ಸಹಾಯ ಸಿಕ್ಕಿರಲಿಲ್ಲ.
ಕಾರ್ತಿಕ್ ಸಂಬಂಧಿಕರು ಕೂಲಿ ಕೆಲಸ ಮಾಡಿಕೊಂಡಿದ್ದು ಬಡವರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಹಣ ಕಟ್ಟಲು ಕಷ್ಟವಾಗುತ್ತದೆಯೆಂದು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸುವ ನಿಟ್ಟಿನಲ್ಲಿ ಕಾರ್ತಿಕ್ ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಜನವರಿ 17ರ ರಾತ್ರಿ ಅಂಬುಲೆನ್ಸ್ ನಲ್ಲಿ ಹೊರಟು ಬಂದಿದ್ದರು. ಆ ಸಂದರ್ಭದಲ್ಲಿ ಕಾರ್ತಿಕ್ ದ್ರವ ಆಹಾರ ಸೇವಿಸುತ್ತಿದ್ದನು.
ಜನವರಿ 19ರಂದು ಮದ್ಯಾಹ್ನ ದಾರಿ ಮದ್ಯೆ ನಾವು ಜ್ಯೂಸ್ ಕುಡಿಸಿದ್ದು ನಂತರ ಆತನು ಮಲಗಿದ್ದನು. ಉಡುಪಿಗೆ ಕರೆದುಕೊಂಡು ಹೋಗುತ್ತಿರುವಾಗ ಕಾರ್ಕಳ ಸಮೀಪದಲ್ಲಿ ಆತನು ತೀರಾ ಅಸ್ವಸ್ಥನಾಗಿ ಉಸಿರಾಡುವುದಕ್ಕೆ ಕಷ್ಟಕರವಾಗಿತ್ತು. ಕೂಡಲೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು, ಅದಾಗಳೇ ಆತನ ಮೃತಪಟ್ಟಿರುವುದನ್ನು ಅಲಿನ ವೈದ್ಯರು ದೃಢಪಡಿಸಿದ್ದರು.
ಕಾರ್ತಿಕ್ ಒರಿಸ್ಸಾ ರಾಜ್ಯದ ಪಾರಾದೀಪ್ ಲಾಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕಾರಣದಿಂದ ಪ್ರಕರಣದ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಪೊಲೀಸರು ಒರಿಸ್ಸಾದ ಪಾರಾದೀಪ್ ಲಾಕ್ ಪೊಲೀಸ್ ಠಾಣೆಗೆ ಸೂಚನಾ ಪತ್ರ ಕಳುಹಿಸಿ ಮಾಹಿತಿ ನೀಡಿದ್ದರು.
ಪ್ಲಾನ್ ಟೆಕ್ ಕಂಪನಿಯ ಪಾರಾದೀಪ್ ನ ಮ್ಯಾನೇಜರ್ ಅಕ್ಷಯ್ ಶೆಟ್ಟಿರವರು ಹೋದಾಗಲೂ ಸ್ಪಂದಿಸದೆ ಈ ಬಗ್ಗೆ ದೂರು ಸ್ವೀಕರಿಸಿರುವುದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
ಇನ್ನು ಕಾರ್ತಿಕ್ ನ ಮೃತದೇಹವನ್ನು ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿರುತ್ತಾರೆ. ಒರಿಸ್ಸಾ ಪಾರಾದೀಪ್ ಲಾಕ್ ಠಾಣೆಯ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಬಿಟ್ಟುಕೊಡುವುದಾಗಿ ಕಾರ್ತೀಕ್ ಮನೆ ಮಂದಿ ನಂಬಿದ್ದರು. ಕಾರ್ತಿಕ್ ಮೃತದೇಹವು ಶವಗಾರದಲ್ಲಿ ಇರಿಸಿ ಮೂರು ದಿನಗಳು ಕಳೆದರೂ ಯಾವುದೇ ಸ್ಪಂದನೆ ಸಿಕ್ಕದ ಹಿನ್ನಲೆಯಲ್ಲಿ ಕಾರ್ತಿಕ್ ಮನೆಮಂದಿ ದಿಕ್ಕುತೋಚದೇ ಉಡುಪಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಯವರನ್ನು ಸಂಪರ್ಕಿಸಿದ್ದಾರೆ.
ಸೂತಕದ ಕರಿಛಾಯೆಯ ನಡುವೆ ಪೊಲೀಸರ ನೆರವಿನಿಂದ ವಾರಿಸ್ತುದಾರರಿಗೆ ಮೃತದೇಹ ಬಿಟ್ಟುಕೊಡಲಾಗಿದೆ.