ಮಂಗಳೂರು, ಡಿ08(SS): ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಮಂತ್ರಿ ಜನಾರ್ದನ ಪೂಜಾರಿ ಅವರನ್ನು ಕೆಲ ದಿನಗಳ ಹಿಂದೆ ಅವಹೇಳನಗೈದಿದ್ದ ಆರೋಪಿಯನ್ನು ಮಂಗಳೂರು ನಗರದ ಪೊಲೀಸರು ದುಬೈಯಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಜನಾರ್ದನ ಪೂಜಾರಿ ಅವರನ್ನು ಅವಹೇಳನಗೈದಿದ್ದ ಆರೋಪಿಯನ್ನು ಹಕೀಂ ಪುತ್ತೂರು ಎಂದು ಗುರುತಿಸಲಾಗಿದೆ.
ಕೆಲ ವರ್ಷಗಳ ಹಿಂದೆ ಹಕೀಂ ದುಬೈಗೆ ಹೋಗಿದ್ದು, ಜನಾರ್ದನ ಪೂಜಾರಿ ಅವರನ್ನು ಎನ್ಕೌಂಟರ್ ಮಾಡಿ, ಪಕ್ಷದಿಂದ ಹೊರದಬ್ಬಿ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದನು. ಈ ಹೇಳಿಕೆ ವಿರುದ್ಧ ಕರಾವಳಿಗರು ಆಕ್ರೋಶ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ, ಶೀಘ್ರ ಹೇಳಿಕೆ ಕೊಟ್ಟವನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು. ಇದೀಗ ಈತನನ್ನು ಮಂಗಳೂರು ನಗರದ ಪೊಲೀಸರು ದುಬೈಯಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತದೆ ಎಂದು ಜನಾರ್ದನ ಪೂಜಾರಿ ನೀಡಿದ್ದ ಹೇಳಿಕೆಯಿಂದ ಆಕ್ರೋಶಗೊಂಡು ಈ ಹೇಳಿಕೆ ನೀಡಿದ್ದ ಹಕೀಂ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಇದು ಭಾರೀ ವೈರಲ್ ಆಗಿತ್ತು. ಸಂಸದ ನಳಿನ್ಕುಮಾರ್ ಕಟೀಲು, ಮಾಜಿ ಶಾಸಕ ಜೆ ಆರ್ ಲೋಬೋ ಸೇರಿದಂತೆ ವಿವಿಧ ಸಂಘಟನೆಗಳು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಂತೆ ನಗರ ಪೊಲೀಸ್ ಆಯುಕ್ತ ಸುರೇಶ್ ಕುಮಾರ್ ಅವರಿಗೆ ಮನವಿ ನೀಡಿದ್ದರು.
ಈ ಮನವಿಗೆ ಸ್ಪಂದಿಸಿ ಮಂಗಳೂರು ನಗರದ ಪೊಲೀಸರು ಹಕೀಂನನ್ನು ದುಬೈಯಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿದೆ.