ಮಂಗಳೂರು, ಡಿ08(SS): ಐತಿಹಾಸಿಕ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ 19ರೂ. ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮಾ.4 ರಿಂದ 13ರ ತನಕ ಬ್ರಹ್ಮಕಲಶೋತ್ಸವ ಮತ್ತು ಮಾ. 14ರಿಂದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಗ್ರಾಮದಲ್ಲಿ ವಿರಾಜಿಸುತ್ತಿರುವ ಸಾವಿರ ಸೀಮೆಯ ಐತಿಹಾಸಿಕ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪುನರ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾ. 4 ರಿಂದ 13ರ ತನಕ ಕ್ಷೇತ್ರದ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ, ಜೊತೆಗೆ ಮಾ.14ರಿಂದ ಒಂದು ತಿಂಗಳುಗಳ ಕಾಲ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಹೇಳಿದ್ದಾರೆ.
ಕ್ಷೇತ್ರದ ಆಡಳಿತ ಮಂಡಳಿಯಲ್ಲಿ ಅಮ್ಮುಂಜೆಗುತ್ತು, ಉಳಿಪಾಡಿಗುತ್ತು, ಚೇರ ಮನೆತನ ಹಾಗೂ ಭಟ್ರ ಮನೆತನದವರು ಪವಿತ್ರಪಾಣಿ ಮತ್ತು ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಂತೆ ಕ್ಷೇತ್ರದ ವಾಸ್ತು ಪುನರ್ ನಿರ್ಮಿಸಲಾಗುತ್ತಿದೆ. ಮಾತ್ರವಲ್ಲ, ಸುಬ್ರಹ್ಮಣ್ಯ ತಂತ್ರಿ ಮಾರ್ಗದರ್ಶನದಲ್ಲಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪೊಳಲಿ ಕ್ಷೇತ್ರದಲ್ಲಿ 75ಲಕ್ಷ ವೆಚ್ಚದಲ್ಲಿ ಶ್ರೀ ದುರ್ಗಾಪರಮೇಶ್ವರಿ ಗುಡಿ, 3.25ಕೋಟಿ ವೆಚ್ಚದಲ್ಲಿ ಶ್ರೀ ರಾಜರಾಜೇಶ್ವರಿ ಪ್ರಧಾನ ಗರ್ಭಗುಡಿ, ರೂ.5ಕೋಟಿ ವೆಚ್ಚದಲ್ಲಿ ಒಳಾಂಗಣ ಸುತ್ತುಪೌಳಿ, ರೂ 25 ಲಕ್ಷ ವೆಚ್ಚದಲ್ಲಿ ಶ್ರೀ ಕ್ಷೇತ್ರಪಾಲ ಸನ್ನಿಧಿ, 1ಕೋಟಿ ವೆಚ್ಚದಲ್ಲಿ ನೂತನ ಧ್ವಜಸ್ತಂಭ, 25ಲಕ್ಷ ವೆಚ್ಚದಲ್ಲಿ ವಸಂತ ಮಂಟಪ, ರೂ 50ಲಕ್ಷ ವೆಚ್ಚದಲ್ಲಿ ಶ್ರೀ ಸತ್ಯನಾರಾಯಣ ಮತ್ತು ಶ್ರೀ ದೇವಳ ಕಚೇರಿ ನಿರ್ಮಾಣದ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಉಳಿದಂತೆ 28ಲಕ್ಷ ವೆಚ್ಚದಲ್ಲಿ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನ ಗುಡಿ, 60ಲಕ್ಷ ವೆಚ್ಚದಲ್ಲಿ ಹೊರಾಂಗಣ ಹಾಸುಕಲ್ಲು, 4ಲಕ್ಷ ವೆಚ್ಚದಲ್ಲಿ ಮಹಾಬಲಿ ಪೀಠ, 70ಲಕ್ಷ ವೆಚ್ಚದಲ್ಲಿ ಅಗ್ರಸಭಾ, 6 ಲಕ್ಷ ವೆಚ್ಚದಲ್ಲಿ ಲಾಕರ್ ಮತ್ತು ಭದ್ರತಾ ಕೊಠಡಿ, 35 ಲಕ್ಷ ವೆಚ್ಚದಲ್ಲಿ ಒಳಾಂಗಣ ನಡು ಚಪ್ಪರ, 4ಲಕ್ಷ ವೆಚ್ಚದಲ್ಲಿ ತೀರ್ಥಬಾವಿ, ಹೀಗೆ ಕ್ಷೇತ್ರದಲ್ಲಿ ಬೇರೆ ಬೇರೆ ರೀತಿಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದ್ದಾರೆ.